ADVERTISEMENT

ಧಾರವಾಡಕ್ಕೆ ಬೇಕು ಸ್ಯಾಟಲೈಟ್ ಸ್ಟೇಶನ್: ಸಂಸದ ಜೋಶಿ

ಪ್ರವೀಣ ಕುಲಕರ್ಣಿ
Published 10 ಮಾರ್ಚ್ 2012, 7:40 IST
Last Updated 10 ಮಾರ್ಚ್ 2012, 7:40 IST

ಹುಬ್ಬಳ್ಳಿ: `ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಂತೆಯೇ ಧಾರವಾಡದಲ್ಲೂ ಒಂದು ಸ್ಯಾಟಲೈಟ್ ಸ್ಟೇಶನ್ ನಿರ್ಮಿಸಬೇಕು. ರೈಲುಗಳನ್ನು ಶುಚಿಗೊಳಿಸುವ, ಅವುಗಳಿಗೆ ನೀರು ತುಂಬುವ ಸಮರ್ಪಕ ವ್ಯವಸ್ಥೆಯನ್ನು ಅಲ್ಲಿ ಮಾಡಬೇಕು. ರೈಲುಗಳ ಪಾರ್ಕಿಂಗ್‌ಗೂ ಅಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು~

-ಉತ್ತರ ಕರ್ನಾಟಕದ ರೈಲ್ವೆ ಯೋಜನೆಗಳ ವಿಷಯವಾಗಿ ಅಧಿಕಾರಯುತವಾಗಿ ಮಾತನಾಡಬಲ್ಲ, ರೈಲ್ವೆ ಸ್ಥಾಯಿ ಸಮಿತಿ ಸದಸ್ಯರೂ ಆಗಿರುವ, ಸಂಸದ ಪ್ರಹ್ಲಾದ ಜೋಶಿ, ಕೇಂದ್ರ ರೈಲ್ವೆ ಸಚಿವರಿಗೆ ನೀಡುವ ಸಲಹೆ ಇದು. ರೈಲ್ವೆ ಬಜೆಟ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಭಾಗಕ್ಕೆ ಆಗಬೇಕಾದ ಕೆಲಸಗಳ ಬಗೆಗೆ `ಪ್ರಜಾವಾಣಿ~ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ವಿವರವಾಗಿ ಮಾತನಾಡಿದರು.

`ಮುಂದಿನ ದಿನಗಳಲ್ಲಿ ರೈಲ್ವೆ ಟ್ರಾಫಿಕ್ ಇನ್ನಷ್ಟು ಹೆಚ್ಚಲಿದ್ದು, ಹುಬ್ಬಳ್ಳಿ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಧಾರವಾಡ ನಿಲ್ದಾಣವನ್ನೂ ಪೂರಕವಾಗಿ ಅಭಿವೃದ್ಧಿ ಮಾಡಬೇಕು~ ಎಂಬುದು ಅವರ ಪ್ರಧಾನ ಸಲಹೆಯಾಗಿದೆ. `ವಿಮಾನ ನಿಲ್ದಾಣ ಮಾದರಿಯಲ್ಲಿ ಹುಬ್ಬಳ್ಳಿ ನಿಲ್ದಾಣವನ್ನು ಉನ್ನತೀಕರಿಸುವ ಕಾಮಗಾರಿ ಕುಂಟುತ್ತಾ ಸಾಗಿದ್ದು, ಇದೇ ವರ್ಷ ಕೆಲಸವನ್ನು ಪೂರ್ಣಗೊಳಿಸಬೇಕು~ ಎಂಬ ಒತ್ತಾಯವನ್ನೂ ಮಾಡುತ್ತಾರೆ.

`ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಹುಬ್ಬಳ್ಳಿ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ಗಳಿಗೆ ಅಲೆದಾಡುವುದು ಕಷ್ಟವಾಗಿದ್ದರಿಂದ ಬ್ಯಾಟರಿಚಾಲಿತ ಟ್ರ್ಯಾಲಿಗಳ ವ್ಯವಸ್ಥೆ ಮಾಡಬೇಕು~ ಎಂಬ ಸಲಹೆ ನೀಡುವ ಅವರು, `ಹುಬ್ಬಳ್ಳಿ ವರ್ಕ್‌ಶಾಪ್ ಅಭಿವೃದ್ಧಿಗೂ ಅಗತ್ಯವಾದ ಹಣ ಬಿಡುಗಡೆ ಮಾಡಬೇಕು~ ಎಂದು ಆಗ್ರಹಿಸುತ್ತಾರೆ.

`ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಧ್ಯೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಎರಡೂ ನಗರಗಳ ಮಧ್ಯೆ ಪುಷ್-ಪುಲ್ ರೈಲುಗಳನ್ನು ಓಡಿಸಬೇಕು. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಮಧ್ಯೆ ಸಂಪರ್ಕ ಕಲ್ಪಿಸುವಂತಹ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಬೇಕು~ ಎಂಬುದು ಅವರ ಒತ್ತಾಯವಾಗಿದೆ.

`ಹೆಬಸೂರಿನಿಂದ ನವಲೂರು ಗೂಡ್ಸ್‌ಶೆಡ್‌ಗೆ ಬೈಪಾಸ್ ನಿರ್ಮಿಸುವ ಕೆಲಸ ಆದಷ್ಟು ಬೇಗ ಆರಂಭವಾಗಬೇಕು. ಇದರಿಂದ ಮುಖ್ಯ ಸಂಪರ್ಕ ಜಾಲ ಪ್ರಯಾಣಿಕರ ರೈಲುಗಳ ಓಡಾಟಕ್ಕೆ ಮುಕ್ತವಾಗುತ್ತದೆ~ ಎನ್ನುವ ಅವರು, ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಜೋಡಿ ಮಾರ್ಗ ರಚನೆಯೂ ನಿಧಾನಗತಿಯಿಂದ ನಡೆದಿದೆ~ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

`ದೇಶದಾದ್ಯಂತ ರೈಲ್ವೆ ಮಾರ್ಗದ ಸಾಂದ್ರತೆ (ಆರ್‌ಆರ್‌ಎಲ್‌ಡಿ) 19.27 ಕಿ.ಮೀ. ಇದ್ದರೆ, ರಾಜ್ಯದಲ್ಲಿ ಮಾತ್ರ 15.72 ಕಿ.ಮೀ. ಇದೆ. ತಮಿಳುನಾಡಿನಲ್ಲಿ 32 ಕಿ.ಮೀ. ಪಂಜಾಬ್‌ನಲ್ಲಿ 45 ಕಿ.ಮೀ. ಆರ್‌ಆರ್‌ಎಲ್‌ಡಿ ಹೊಂದಿವೆ. ರಾಜ್ಯದ 175 ತಾಲ್ಲೂಕುಗಳ ಪೈಕಿ 81 ತಾಲ್ಲೂಕುಗಳು (ಶೇ 46 ಪ್ರದೇಶ) ರೈಲ್ವೆ ಜಾಲವನ್ನೇ ಹೊಂದಿಲ್ಲ. ಇದುವರೆಗೆ ಕೇಂದ್ರದಲ್ಲಿ ಆಡಳಿತ ನಡೆಸಿದ ಸರ್ಕಾರಗಳ ಮಲತಾಯಿ ಧೋರಣೆಯೇ ಇದಕ್ಕೆ ಕಾರಣ~ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

`ಹುಬ್ಬಳ್ಳಿ-ಪುಣೆ ಮಧ್ಯೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು. ಹುಬ್ಬಳ್ಳಿಯಿಂದ ಬೆಂಗಳೂರು, ಗುಲ್ಬರ್ಗಾ ಮತ್ತು ಹೈದರಾಬಾದ್‌ಗಳಿಗೆ ಸೂಪರ್ ಫಾಸ್ಟ್ ರೈಲುಗಳ ಸೇವೆಯನ್ನು ಆರಂಭಿಸಬೇಕು ಮತ್ತು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲನ್ನು ವಾರದ ಏಳೂ ದಿನವೂ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೂಲಕವೇ ಓಡಿಸಬೇಕು~ ಎಂಬ ಬೇಡಿಕೆಗಳನ್ನು ರೈಲ್ವೆ ಇಲಾಖೆ ಮುಂದೆ ಬಲವಾಗಿ ಮಂಡಿಸುತ್ತಾರೆ.

`ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲನ್ನು ಈಗಿರುವ ರಾತ್ರಿ 10.40ರ ಬದಲಿಗೆ ಒಂಬತ್ತು ಗಂಟೆಯೊಳಗೇ ಹುಬ್ಬಳ್ಳಿಯಿಂದ ಬಿಡುವಂತೆ ಮಾಡಬೇಕು. ಆಗ ರೈಲು ಬೆಂಗಳೂರನ್ನು ಬೆಳಿಗ್ಗೆ 5.30ರೊಳಗೆ ತಲುಪಲಿದ್ದು, ಈ ಭಾಗದ ಜನರು ತಮ್ಮ ಕೆಲಸ ಪೂರೈಸಲು ಪೂರ್ತಿದಿನ ಕಾಲಾವಕಾಶ ಸಿಗಲಿದೆ~ ಎಂಬ ಸಲಹೆಯನ್ನೂ ನೀಡುತ್ತಾರೆ.

`ರೈಲ್ವೆ ಬೋಗಿಗಳಲ್ಲಿ ಎಸಿ ಕೋಚ್‌ಗಳನ್ನು ಹೊರತುಪಡಿಸಿ ಮಿಕ್ಕ ಕಡೆಗಳಲ್ಲಿ -ವಿಶೇಷವಾಗಿ ಪ್ಯಾಸೆಂಜರ್ ರೈಲುಗಳಲ್ಲಿ- ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದ್ದು, ಪ್ರಯಾಣಿಕರಿಗೆ ರೈಲು ಪ್ರಯಾಣ ಎಂಬುದು ಹಿಂಸೆಯಾಗಿದೆ. ನಾನೇ ಹಲವು ಬಾರಿ ಈ ಅನುಭವ ಪಡೆದಿದ್ದೇನೆ. ಸ್ವಚ್ಛತೆಗೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ~ ಎನ್ನುತ್ತಾರೆ.

`ಧಾರವಾಡ-ಮೈಸೂರು ರೈಲಿಗೆ ಕುಂದುಗೋಳ ನಿಲ್ದಾಣದಲ್ಲಿ ಮತ್ತು ಎಲ್ಲ ಎಕ್ಸ್‌ಪ್ರೆಸ್ ರೈಲುಗಳಿಗೆ ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಬೇಕು~ ಎಂಬ ಒತ್ತಾಯವನ್ನೂ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.