ADVERTISEMENT

ಧಾರಾಕಾರ ಮಳೆ; 40ಕ್ಕೂ ಅಧಿಕ ಮನೆ ಹಾನಿ

ಹರಪನಹಳ್ಳಿ ತಾಲ್ಲೂಕಿನಲ್ಲಿ ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 5:19 IST
Last Updated 14 ಸೆಪ್ಟೆಂಬರ್ 2013, 5:19 IST

ಹರಪನಹಳ್ಳಿ: ತಾಲ್ಲೂಕಿನ ತೆಲಿಗಿ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆರೆ– ಕಟ್ಟೆಗಳು ತುಂಬಿ ಹರಿಯುತ್ತಿದ್ದು, ತೆಲಿಗಿ ಸೇರಿದಂತೆ ವಿವಿಧೆಡೆಗಳಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಹಗಲಿಡಿ ಬಿಸಿಲಿನಿಂದ ಕೂಡಿದ ವಾತಾವರಣ ಇತ್ತಾದರೂ, ಸಂಜೆ ವೇಳೆ ಭಾರೀ ಮಳೆ ಸುರಿಯಿತು. ಪರಿಣಾಮ, ತೆಲಿಗಿ ಗ್ರಾಮದ ಪರಿಶಿಷ್ಟರ ಹಳೆ ಕಾಲೊನಿ ಹಾಗೂ ಹೊಸಕ್ಯಾಂಪಿನ ನೂರಾರು ಮನೆಗಳಿಗೆ ನೀರು ನುಗ್ಗಿದೆ. ರಾತ್ರೋರಾತ್ರಿ ಮಕ್ಕಳು– ಮರಿ ಕಟ್ಟಿಕೊಂಡು ಜೀವಭಯದಿಂದ ಎತ್ತರದ ಪ್ರದೇಶಗಳಿಗೆ ತೆರಳಿದ ನಿವಾಸಿಗಳು ರಾತ್ರಿಯನ್ನು ಕಳೆದಿದ್ದಾರೆ. ಹೊಸಕ್ಯಾಂಪಿನ ಈಡಿಗರ ಹನುಮಂತಪ್ಪ  ಎಂಬುವವರ ಮನೆಯ ಗೋಡೆ ಕುಸಿದಿದೆ.  ಬಿಕ್ಕಿಕಟ್ಟೆ ಗ್ರಾಮದಲ್ಲಿ ಬಾರಿಕರ ಶೇಖರಪ್ಪ  ಹಾಗೂ ನಾಗಮ್ಮ  ಎಂಬುವವರ ಮನೆಗೆ ನೀರು ನುಗ್ಗಿದೆ. ಹೀಗಾಗಿ ಎರಡು ಕುಟುಂಬಗಳು ಶಾಲೆಯ ಕಾರಿಡಾರ್ ಮೇಲೆ ರಾತ್ರಿ ಕಳೆದಿವೆ.

ತೆಲಿಗಿ ಹೋಬಳಿಯ ಯಡಿಹಳ್ಳಿ ಗ್ರಾಮದಲ್ಲಿ ೧೧ಮನೆ, ತಲುವಾಗಲು ಗ್ರಾಮದಲ್ಲಿ ೭ಮನೆ, ಮತ್ತೂರು, ದುಗ್ಗಾವತಿ, ರಂಗಾಪುರ ಹಾಗೂ ತೆಲಿಗಿ ಗ್ರಾಮದಲ್ಲಿ ತಲಾ ೩ಮನೆ, ಅರಸನಾಳು, ಕುಂಚೂರು, ಕುಂಚೂರು ಕೆರೆತಾಂಡ ಗ್ರಾಮದಲ್ಲಿ ತಲಾ ೨ಮನೆ, ಗುಂಡಗತ್ತಿ, ಮಾಚಿಹಳ್ಳಿ ಕೊರಚರಹಟ್ಟಿ ಹಾಗೂ ಮಾಚಿಹಳ್ಳಿ ತಾಂಡದಲ್ಲಿ ತಲಾ ೧ ಮನೆ ಸೇರಿದಂತೆ ೪೦ಕ್ಕೂ ಅಧಿಕ ಮನೆಗಳು ಭಾಗಶಃ ಕುಸಿದಿವೆ. ಕಂಡಿಕೆರೆ ತಾಂಡಾ ಗ್ರಾಮದಲ್ಲಿ ತುಳಜಾಭವಾನಿ ಹಾಗೂ ಗಾಳೆಮ್ಮ ದೇವಸ್ಥಾನ ಧರೆಗೆ ಉರುಳಿವೆ. ಹತ್ತಾರು ಚೆಕ್‌ಡ್ಯಾಂಗಳು ನೀರಿನ ರಭಸದಲ್ಲಿ ಕೊಚ್ಚಿಹೋಗಿವೆ.

ಅರಸೀಕೆರೆ ಹೋಬಳಿಯ ಕ್ಯಾರಕಟ್ಟೆ ಗ್ರಾಮದ ಹೊರವಲಯದಲ್ಲಿ ಬಾರಿಕರ ದೊಡ್ಡಶೇಖರಪ್ಪ  ಎಂಬುವವರಿಗೆ ಸೇರಿದ ಕೋಳಿಫಾರಂ ಒಳಗೆ ನೀರು ನುಗ್ಗಿದ ಪರಿಣಾಮ, ಸುಮಾರು ೯ದಿನಗಳ ಹಿಂದೆಯಷ್ಟೇ ಸಾಕಾಣಿಕೆ ಮಾಡಲು ಖರೀದಿಸಿ ತಂದಿದ್ದ ಸುಮಾರು 3ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಸಾವನ್ನಪ್ಪಿವೆ. ಕೋಳಿ ಫಾರ್ಮ್‌ಗೆ ಹೊಂದಿಕೊಂಡಿರುವ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಿರುವ ಗುತ್ತಿಗೆದಾರ ಚರಂಡಿ ತುಂಬೆಲ್ಲಾ ಮಣ್ಣು ತುಂಬಿದ ಹಿನ್ನೆಲೆಯಲ್ಲಿ ಮಳೆ ನೀರು ಸಂಪೂರ್ಣವಾಗಿ ಕೋಳಿ
ಫಾರ್ಮ್  ಒಳಗೆ ಹೊಕ್ಕಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಮೊತ್ತದ ಕೋಳಿ ಮರಿ ಸಾವನ್ನಪ್ಪಿವೆ.

ವಿವಿಧ ಕೆರೆಗಳು ಕೋಡಿಬಿದ್ದು ಧಾರಾಕಾರವಾಗಿ ರಸ್ತೆಯ ಮೇಲ್ಭಾಗದಲ್ಲಿ ನೀರು ಹರಿದ ಪರಿಣಾಮ, ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಯಿತು. ಧಾರಾಕಾರ ಮಳೆಯಿಂದಾಗಿ ಬೆಂಡೆಗೇರಿ ಕೆರೆ ಒಡಲಾಳದಲ್ಲಿ ನೀರು ಸಂಪೂರ್ಣವಾಗಿ ಭರ್ತಿಯಾಗಿ ಕೋಡಿ ಬಿದ್ದಿದೆ. ಹೀಗಾಗಿ ಹೊಳಲು– ದಾವಣಗೆರೆ ರಾಜ್ಯ ಹೆದ್ದಾರಿ– ೧೫೦ರಲ್ಲಿನ ಬೆಂಡಿಗೇರಿ– ಬಾಲೇನಹಳ್ಳಿ ರಸ್ತೆ ಮಧ್ಯದ ಸೇತುವೆ ಮೇಲೆ ನೀರು ಹರಿದ ಪರಿಣಾಮ ವಾಹನ ಸಂಚಾರ ಕಡಿತಗೊಂಡಿತ್ತು. ಬಿಕ್ಕಿಕಟ್ಟಿ ಕೆರೆಯೂ ಕೋಡಿ ಬಿದ್ದು, ನೀರು ಧಾರಾಕಾರವಾಗಿ ರಸ್ತೆಯ ಮೇಲೆ ಹರಿದ ಪರಿಣಾಮ ಬಿಕ್ಕಿಕಟ್ಟಿ– ತೆಲಿಗಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಬಿಕ್ಕಿಕಟ್ಟಿ– ಬೆಂಡಿಗೆರೆ ದೊಡ್ಡತಾಂಡ ರಸ್ತೆ ಮೇಲೂ ಕೆರೆ ನೀರು ಸಂಪೂರ್ಣ ಆವೃತವಾಗಿದೆ. ತೆಲಿಗಿ– ರಾಗಿಮಸಲವಾಡ ರಸ್ತೆಯೂ ಜಲಾವೃತವಾಗಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಬಿಕ್ಕಿಕಟ್ಟಿ ಕೆರೆಯಲ್ಲಿ ಮೀನು ಸಾಕಾಣಿಕೆಗಾಗಿ ಬಿಡಲಾಗಿದ್ದ 3 ಲಕ್ಷದಷ್ಟು ೩ತಿಂಗಳ ವಯೋಮಾನದ ಮೀನು ಮರಿ, ಬಾಲೇನಹಳ್ಳಿ ಕೆರೆಯಲ್ಲಿ 2 ಲಕ್ಷ ಹಾಗೂ ಬೆಂಡಿಗೇರಿ ಕೆರೆಯಲ್ಲಿನ 1.50ಲಕ್ಷ ಮೀನು ಮರಿಗಳು ಕೋಡಿಯ ನೀರಿನಲ್ಲಿ ಕೊಚ್ಚಿಹೋಗಿದ್ದು, ಗುತ್ತಿಗೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಹರಿಹರ ತಾಲ್ಲೂಕಿನಲ್ಲಿ ಆರು ಮನೆ ಹಾನಿ
ಹರಿಹರ: ತಾಲ್ಲೂಕಿನಲ್ಲಿ ಗುರುವಾರ ರಾತ್ರಿಯಿಂದ ಬೆಳಗಿನವರೆಗೆ ಸರಾಸರಿ 32.75 ಮಿ.ಮೀ. ಮಳೆಯಾಗಿದ್ದು, ಆರು ಮನೆಗಳ ಗೋಡೆ ಕುಸಿದಿವೆ. ನಗರದಲ್ಲಿ 46.2, ಮಲೇಬೆನ್ನೂರು 10.2, ಕೊಂಡಜ್ಜಿ 53.3 ಹಾಗೂ ಹೊಳೆಸಿರಿಗೆರೆಯಲ್ಲಿ 18.6 ಒಟ್ಟಾರೆ 128.3 ಮಿ.ಮೀ.ನಷ್ಟು ಮಳೆಯಾಗಿದೆ. ನಗರದ ಪರಿಶಿಷ್ಟರ ಕಾಲೋನಿ ಹಾಗೂ ಮಹಾತ್ಮಗಾಂಧಿ ಕೊಳಚೆ ಪ್ರದೇಶದಲ್ಲಿ ಎರಡು ಮನೆಗಳು, ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಮೂರು ಹಾಗೂ ಸಾರಥಿ ಗ್ರಾಮದಲ್ಲಿ ಒಂದು, ಒಟ್ಟುಆರು ಮನೆಗಳ ಗೋಡೆ ಕುಸಿದಿವೆ.
ಸಾರಥಿ ಮತ್ತು ಚಿಕ್ಕಬಿದರೆ ಮಧ್ಯದ ಹಳ್ಳದ ನೀರಿನ ಹರಿವು ಹೆಚ್ಚಾಗಿದ್ದು,  ರಸ್ತೆ ಕಡಿತಗೊಂಡಿದೆ ಎಂದು ತಹಶೀಲ್ದಾರ್ ಜಿ.ನಜ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.