ADVERTISEMENT

ನಗರೋತ್ಥಾನ ಯೋಜನೆಗೆ 1,720 ಕೋಟಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST
ನಗರೋತ್ಥಾನ ಯೋಜನೆಗೆ 1,720 ಕೋಟಿ
ನಗರೋತ್ಥಾನ ಯೋಜನೆಗೆ 1,720 ಕೋಟಿ   

ದಾವಣಗೆರೆ: ನಗರೋತ್ಥಾನ ಯೋಜನೆಯ ಅಡಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ 1,720 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.

ಇಲ್ಲಿನ ಕರೂರು ಪ್ರದೇಶದಲ್ಲಿ 22.75 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾಡಳಿತ ಭವನ, ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ ಹಾಗೂ ವಿವಿಧೆಡೆ ಶಾಲಾ- ಕಾಲೇಜುಗಳಿಗೆ ನಿರ್ಮಿಸಿರುವ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

`1994ರಿಂದಲೂ ವಿಧಾನಸಭೆಯಲ್ಲಿದ್ದೇನೆ. ಯಾವುದೇ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ವಿಶೇಷ ಅನುದಾನ ಕೊಟ್ಟಿರಲಿಲ್ಲ. ವಿಶೇಷ ಅನುದಾನಕ್ಕಾಗಿ ದಂಬಾಲು ಬೀಳಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಪ್ರತಿ ನಗರಪಾಲಿಕೆಗೆ ವರ್ಷಕ್ಕೆ ರೂ 100 ಕೋಟಿ ವಿಶೇಷ ಅನುದಾನ ನೀಡುತ್ತಿದೆ.

ನಗರಸಭೆ, ಪುರಸಭೆಗೆ ಕನಿಷ್ಠ ರೂ 5ರಿಂದ 30 ಕೋಟಿವರೆಗೆ ವಿಶೇಷ ಅನುದಾನ ಕೊಟ್ಟಿದ್ದೇವೆ. ಮಾದರಿ ರಾಜ್ಯ ಮಾಡಲು ಸರ್ಕಾರ ಅಭಿವೃದ್ಧಿ ಕಾರ್ಯ ಮುಂದುವರಿಸಲಿದೆ~ ಎಂದರು.

ಇಡೀ ರಾಷ್ಟ್ರದಲ್ಲಿಯೇ ಮೊದಲಿಗೆ ಕರ್ನಾಟಕ  ಬಿಜೆಪಿ ಸರ್ಕಾರ `ಸುವರ್ಣ ಗ್ರಾಮ~ ಯೋಜನೆ ಜಾರಿಗೊಳಿಸಿದೆ. ಆಯ್ಕೆಯಾದ ಗ್ರಾಮಕ್ಕೆ ಸರಾಸರಿ 1 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. 3,330 ಗ್ರಾಮ ಆಯ್ಕೆಯಾಗಿದ್ದು, ಈ ವರೆಗೆ ರೂ 3 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಇದೀಗ 5ನೇ ಹಂತದಲ್ಲಿ ಒಂದು ಸಾವಿರ ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಕಾಮಗಾರಿಗಳು ಶೀಘ್ರವೇ ಆರಂಭವಾಗಲಿವೆ ಎಂದು ತಿಳಿಸಿದರು.

ಒಂದು ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಕನಿಷ್ಠ ರೂ 30 ಲಕ್ಷದಂತೆ ಹಣ ಒದಗಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 50 ಕಿ.ಮೀ. ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ, ಸರ್ಕಾರ ಜನರ ಪ್ರೀತಿಗೆ ಪಾತ್ರವಾಗಿದೆ ಎಂದು ವಿಶ್ವಾಸದಿಂದ ಹೇಳಿದರು.

ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರಕ್ಕೆ ರೂ 3,600 ಕೋಟಿ ಹೊರೆಯಾದರೂ ಸಹ ರೈತರ ಹಿತದೃಷ್ಟಿಯಿಂದ ಸಹಕಾರ ಬ್ಯಾಂಕ್‌ಗಳಲ್ಲಿ ರೂ 25 ಸಾವಿರದವರೆಗಿನ ಸಾಲ ಮನ್ನಾ ಮಾಡುವ ದಿಟ್ಟ ಕ್ರಮ ಕೈಗೊಂಡಿದೆ. ಎಲ್ಲ ವರ್ಗದವರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 4 ರಿಂದ 6 ಸಾವಿರ ಮನೆ ನಿರ್ಮಾಣದ ಗುರಿ ಹೊಂದಲಾಗಿದೆ. ಹಿಂದಿನ ಯಾವುದೇ ಸರ್ಕಾರ ಈ ಕೆಲಸ ಮಾಡಿರಲಿಲ್ಲ. ಇದೀಗ, ವಸತಿ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ರೂ 1 ಸಾವಿರ ಕೋಟಿ ಅನುದಾನವನ್ನು ವಸತಿ ಇಲಾಖೆಗೆ ನೀಡಲಾಗಿದೆ ಎಂದು ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.