ADVERTISEMENT

ನಳನಳಿಸುತ್ತಿರುವ ಶೇಂಗಾ ಬೆಳೆ

ಹೊನ್ನಾಳಿ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 13:00 IST
Last Updated 21 ಜೂನ್ 2013, 13:00 IST

ಹೊನ್ನಾಳಿ: ತಾಲ್ಲೂಕಿನ ವಿವಿಧೆಡೆ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಬಿತ್ತನೆ ಸಂಪೂರ್ಣಗೊಂಡಿದೆ. ಕಳೆದ ಮೂರು ವಾರಗಳಿಂದ ಸುರಿದ ಉತ್ತಮ ಮಳೆಯಿಂದಾಗಿ ಶೇಂಗಾ ಬೆಳೆ ನಳನಳಿಸುತ್ತಿದೆ. 15 ದಿನಗಳ ಅವಧಿಯ ಶೇಂಗಾ ಹೊಲದಲ್ಲಿ ರೈತರು ಎಡೆಕುಂಟೆ ಹೊಡೆಯುತ್ತಿದ್ದು, ಈ ಬಾರಿ  ಮಳೆ ಚೆನ್ನಾಗಿ ಸುರಿಯುತ್ತಿರುವುದರಿಂದ ಉತ್ತಮ ಇಳುವರಿಯ ಆಶಾಭಾವ ಹೊಂದಿದ್ದಾರೆ.

ತಾಲ್ಲೂಕಿನ ಅರಬಗಟ್ಟೆ, ಸೊರಟೂರು, ಮಾದನಬಾವಿ, ಮಾದೇನಹಳ್ಳಿ, ಎರೆಹಳ್ಳಿ, ಹತ್ತೂರು, ಕತ್ತಿಗೆ, ಕೆಂಚಿಕೊಪ್ಪ, ನ್ಯಾಮತಿ, ಸುರಹೊನ್ನೆ, ರಾಮೇಶ್ವರ, ಬೆಳಗುತ್ತಿ-ಮಲ್ಲಿಗೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶೇಂಗಾ ಬೆಳೆಯಲಾಗುತ್ತದೆ.

ಮಾದನಬಾವಿ ಗ್ರಾಮದ ಶೇಂಗಾ ಬೆಳೆಗಾರ ಬೀರಪ್ಪ ಮಾತನಾಡಿ, ಶೇಂಗಾ ವಾಣಿಜ್ಯ ಬೆಳೆಯಾಗಿ ಪ್ರಾಮುಖ್ಯತೆ ಪಡೆದಿದೆ. ಅದಕ್ಕಿಂತ ಹೆಚ್ಚಾಗಿ ಶೇಂಗಾ ಬೆಳೆ ಕೃಷಿಕರ ಒಡನಾಡಿಯಾಗಿದೆ. ಶೇಂಗಾ ಬೆಳೆಯ ಹೊಟ್ಟು ಜಾನುವಾರುಗಳಿಗೆ ಪ್ರಿಯವಾದ ಆಹಾರ. ಅದನ್ನು ಶೇಖರಿಸಿ ಬಳಸಲಾಗುತ್ತದೆ. ಶೇಂಗಾ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಶೇಂಗಾ ಮಣ್ಣಿನ ಫಲವತ್ತತೆ ದ್ವಿಗುಣಗೊಳ್ಳುತ್ತದೆ. ಹಾಗಾಗಿ, ಶೇಂಗಾವನ್ನು ಎಲ್ಲಾ ರೈತರು ಪರ್ಯಾಯ ಬೆಳೆಯಾಗಿ ಬೆಳೆಯಬೇಕು ಎಂದು ಹೇಳುತ್ತಾರೆ.

ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ಆರ್. ರೇವಣಸಿದ್ದನಗೌಡ ಮಾತನಾಡಿ, ಜೂನ್ ತಿಂಗಳ ವಾಡಿಕೆ ಮಳೆ 20.2 ಸೆಂ.ಮೀ. ಈ ಬಾರಿ ಜೂನ್ 15ರವರೆಗೆ 14.1 ಸೆಂ.ಮೀ. ಮಳೆಯಾಗಿದೆ. ಈಗಾಗಲೇ ತಾಲ್ಲೂಕಿನಲ್ಲಿ 2100 ಹೆಕ್ಟೇರ್‌ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. 15-20ದಿನದ ಶೇಂಗಾ ಬೆಳೆ ನಳನಳಿಸುತ್ತಿದ್ದು, ರೈತರು ಹುಮ್ಮಸ್ಸಿನಿಂದ ಎಡೆಕುಂಟೆ ಹೊಡೆಯುತ್ತಿದ್ದಾರೆ ಎಂದು ತಿಳಿಸಿದರು.

ತಾಲ್ಲೂಕಿನ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಇದ್ದು, ಈವರೆಗೆ 1100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. 900 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ತಾಲ್ಲೂಕಿನ ಹೊಳೆಅರಳಹಳ್ಳಿ, ಹನುಮಸಾಗರ, ಬಲಮುರಿ, ಎಚ್. ಗೋಪಗೊಂಡನಹಳ್ಳಿ, ಸೋಮನಮಲ್ಲಾಪುರ, ಎರೆಹಳ್ಳಿ, ದೊಡ್ಡೆರೇಹಳ್ಳಿ, ಮಾದೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹತ್ತಿ ಬೆಳೆಯುತ್ತಾರೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.