ADVERTISEMENT

ನಾಗರ ಪಂಚಮಿ ಮಕ್ಕಳ ಪಂಚಮಿ ಆಗಲಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2011, 8:05 IST
Last Updated 3 ಆಗಸ್ಟ್ 2011, 8:05 IST
ನಾಗರ ಪಂಚಮಿ ಮಕ್ಕಳ ಪಂಚಮಿ ಆಗಲಿ
ನಾಗರ ಪಂಚಮಿ ಮಕ್ಕಳ ಪಂಚಮಿ ಆಗಲಿ   

ದಾವಣಗೆರೆ: ನಾಗರ ಪಂಚಮಿ ಹಬ್ಬ `ಮಕ್ಕಳ ಪಂಚಮಿ~ ಆಗಲಿ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಶಿಸಿದರು.ನಗರದಲ್ಲಿ ಮಂಗಳವಾರ ಬಿಜೆಎಂ ಸ್ಕೂಲ್, ಜಿಎನ್‌ಬಿ ಪ್ರೌಢಶಾಲೆ ಹಾಗೂ ಕಾಯಕ ದಾಸೋಹ ಮಂಟಪದ ಆಶ್ರಯದಲ್ಲಿ ನಡೆದ `ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು~ ಸಪ್ತಾಹದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕಲ್ಲುನಾಗರಕ್ಕೆ ಹಾಲೆರೆಯುವ ಬದಲು, ಮಕ್ಕಳಿಗೆ ಹಾಲನ್ನು ನೀಡುವ ಭಾವೈಕ್ಯದ ಕಾರ್ಯಕ್ರಮವನ್ನು ಸರ್ಕಾರ `ಮಕ್ಕಳ ಪಂಚಮಿ~ ಹೆಸರಲ್ಲಿ ಜಾರಿಗೆ ತರಬೇಕು ಎಂದು ಅವರು ಸಲಹೆ ನೀಡಿದರು.
ಪಂಚಮಿ ಹಬ್ಬದಂದು ದೇಶದಲ್ಲಿ 10 ದಶಲಕ್ಷ ಲೀಟರ್‌ಗೂ ಹೆಚ್ಚು ಹಾಲು ವ್ಯರ್ಥವಾಗುತ್ತಿದೆ.

ಮೊಟ್ಟೆಯಿಂದ ಹೊರಬರುವ ಸಸ್ತನಿಯಾದ ಹಾವು ಎಂದಿಗೂ ಹಾಲನ್ನು ಕುಡಿಯುವುದಿಲ್ಲ ಎಂದು ವಿಜ್ಞಾನ ಹೇಳುತ್ತದೆ. ಜನರು ಮೂಢನಂಬಿಕೆಯಿಂದ ಹಾವಿಗೆ ಹಾಲೆರೆಯುವ ಬದಲು ಮಕ್ಕಳಿಗೆ ನೀಡಿದಲ್ಲಿ ಮನಸ್ಸಿಗೆ ತೃಪ್ತಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಈ ಬಾರಿ `ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು~ ಸಪ್ತಾಹ ನಡೆಸಲಾಗುವುದು. ಸಪ್ತಾಹಕ್ಕೆ ಇಂದು ಚಾಲನೆ ದೊರೆತಿದೆ ಎಂದರು.

ಸರ್ಕಾರ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವಂತೆಯೇ, ದೇವಾಲಯಗಳಲ್ಲಿ ಇರುವ ಆಭರಣಗಳನ್ನೂ ಸ್ವಾಧೀನ ಪಡಿಸಿಕೊಂಡು ಬಡವರಿಗೆ ಹಂಚುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಮೂಢನಂಬಿಕೆಯಿಂದ ಹಾಲನ್ನು ಹಾವಿಗೆ ಎರೆಯುವ ಬದಲು ಮಕ್ಕಳಿಗೆ ನೀಡುವ ಈ ಕಾರ್ಯಕ್ರಮ ಸ್ತುತ್ಯಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನವದೆಹಲಿಯ ಗದಗಿನ ತೋಂಟದಾರ್ಯ ಶಾಖಾಮಠ ಬಸವಾಶ್ರಮದ ಮಹಾಂತದೇವರು ಸ್ವಾಮೀಜಿ ಮಾತನಾಡಿ, ಧಾರ್ಮಿಕ ಆಚರಣೆಯಲ್ಲಿ ತಪ್ಪುಗಳಾಗಿದ್ದರೆ, ಅದನ್ನು ಬದಲಾವಣೆ ಮಾಡಿ, ವೈಜ್ಞಾನಿಕ ಚಿಂತನೆ ನಡೆಸಬೇಕು. ಧಾರ್ಮಿಕತೆ ಬರೀ ಮೌಢ್ಯದ ಜಾಡ್ಯವಾಗಬಾರದು ಎಂದರು.

ಇದೇ ಸಂದರ್ಭದಲ್ಲಿ ಮುರುಘರಾಜೇಂದ್ರ ಕೋ- ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಎಸ್. ಓಂಕಾರಪ್ಪ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಶಿಕ್ಷಕಿ ನಾಗರತ್ನಮ್ಮ ಪ್ರತಿಜ್ಞಾವಿಧಿ ಬೋಧಿಸಿದರು.

ಬಸವ ಕಲಾಲೋಕದ ಸದಸ್ಯರು ಪ್ರಾರ್ಥಿಸಿದರು. ಅಗಡಿ ಮಂಜುನಾಥ ಸ್ವಾಗತಿಸಿದರು. ಎಚ್. ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ದೀಪಾ ವಂದಿಸಿದರು.

 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT