ದಾವಣಗೆರೆ: ನಗರದ ನೂತನ ಮೇಯರ್ ಆಗಿ ನಿರೀಕ್ಷೆಯಂತೆಯೇ ಕಾಂಗ್ರೆಸ್‌ನ ರೇಣುಕಾಬಾಯಿ ವೆಂಕಟೇಶ್‌ನಾಯ್ಕ ಹಾಗೂ ಉಪ ಮೇಯರ್ ಆಗಿ ಅಬ್ದುಲ್ ಲತೀಫ್ ಅವರು ಪಾಲಿಕೆಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಚುನಾಯಿತ ಸದಸ್ಯರಲ್ಲಿ ರೇಣುಕಾಬಾಯಿ (15ನೇ ವಾರ್ಡ್, ಭಾರತ್ ಕಾಲೊನಿ) ಬಿಟ್ಟರೆ ಈ ವರ್ಗಕ್ಕೆ ಸೇರಿದ ಬೇರೆ ಯಾರೂ ಇಲ್ಲದಿದ್ದುದ್ದರಿಂದ ಪೈಪೋಟಿಯೇ ಕಂಡುಬರಲಿಲ್ಲ. ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಬಹಳ ಪೈಪೋಟಿ ಇತ್ತು. ಆದರೆ, ಆಡಳಿತ ಪಕ್ಷವಾದ ಕಾಂಗ್ರೆಸ್ ವರಿಷ್ಠರ ಆದೇಶದಂತೆ ಅಬ್ದುಲ್ ಲತೀಫ್ ಅವರನ್ನು (27ನೇ ವಾರ್ಡ್, ಕೆಟಿಜೆ ನಗರ) ಬಿಟ್ಟರೆ ಇತರರು ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ, ಅವಿರೋಧ ಆಯ್ಕೆ ಸಾಧ್ಯವಾಯಿತು. ಇದೇ ವೇಳೆ, ನಾಲ್ಕು ವಿವಿಧ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಅವಿರೋಧವಾಗಿ ನಡೆಯಿತು.
1. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ಬಿ.ಪರಸಪ್ಪ, ಬಿ.ಎನ್.ಶ್ರೀನಿವಾಸ್, ಅಶ್ವಿನಿ ವೇದಮೂರ್ತಿ, ರೇಖಾ ನಾಗರಾಜ್, ಕೆ.ಚಮನ್‌ಸಾಬ್, ಎಚ್.ತಿಪ್ಪಣ್ಣ, ಲಕ್ಷ್ಮಿದೇವಿ.
2. ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಲಿಂಗರಾಜ್, ಅನಿತಾಬಾಯಿ ಮಾಲತೇಶ್, ದಿನೇಶ್ ಕೆ.ಶೆಟ್ಟಿ, ಎಂ.ಹಾಲೇಶ್, ಸುರೇಂದ್ರ ಮೊಯಿಲಿ, ಎಸ್.ಬಸಪ್ಪ, ಅಬ್ದುಲ್ ರಹೀಂ.
3. ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ: ಎನ್.ಸುರೇಶ್, ಪಿ.ಎಸ್.ಶೋಬಾ ಪಲ್ಲಾಗಟ್ಟೆ, ನಿಂಗರಾಜ್, ಆರ್.ಶ್ರೀನಿವಾಸ್, ಶಿವನಳ್ಳಿ ರಮೇಶ್, ಗೌಸ್ ಅಹಮದ್.
4. ಲೆಕ್ಕಪತ್ರಗಳ ಸ್ಥಾಯಿ ಸಮಿತಿ: ಅಲ್ತಾಫ್ ಹುಸೇನ್, ಬಸವರಾಜ್ ಶಿವಗಂಗಾ, ಗೌರಮ್ಮ, ಚಂದ್ರಶೇಖರ್, ಶೈಲಾ ನಾಗರಾಜ್, ಎಚ್.ಗುರುರಾಜ್, ಬೆಳವನೂರು ನಾಗರಾಜಪ್ಪ ಆಯ್ಕೆಯಾದರು.
ನೂತನ ಮೇಯರ್ ಹಾಗೂ ಉಪ ಮೇಯರ್ ಅನ್ನು ಅಧಿಕಾರಿಗಳು ಹಾಗೂ ಸದಸ್ಯರು ಹೂಗುಚ್ಛ ನೀಡಿ ಅಭಿನಂದಿಸಿದರು. ಇದಕ್ಕೂ ಮುನ್ನ, ನೂತನ ಸದಸ್ಯರು ಸಂವಿಧಾನ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ, ಚುನಾಯಿತರಾಗಿ ವರ್ಷದ ನಂತರ ಸದಸ್ಯರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದಂತಾಯಿತು. ಪ್ರಾದೇಶಿಕ ಆಯುಕ್ತ ಗೌರವ್‌ಗುಪ್ತ ಚುನಾವಣೆ ಹಾಗೂ ಪ್ರಮಾಣವಚನ ಬೋಧನೆಯ ಪ್ರಕ್ರಿಯೆ ನಡೆಸಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ವೆಂಕಟೇಶ್, ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್, ನಗರಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ, ಉಪ ಆಯುಕ್ತರಾದ ಮಹಾಂತೇಶ್, ರವೀಂದ್ರ ಮೊದಲಾದವರು ಹಾಜರಿದ್ದರು.
ನೀತಿಸಂಹಿತೆ ನಡುವೆಯೂ...
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ಅವಧಿಯ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗುತ್ತಿದ್ದಂತೆಯೇ ಪಾಲಿಕೆ ಆವರಣದಲ್ಲಿ ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಕ್ಷದ ಬಾವುಟಗಳನ್ನು ಹಿಡಿದು ವಿಜಯೋತ್ಸವ ಆಚರಿಸಿದರು. ನೂತನ ಸದಸ್ಯರ ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ಪಾಲಿಕೆ ಸಭಾಂಗಣವನ್ನು ಹೂಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.
ರೇಣುಕಾಬಾಯಿ 8ನೇ ಮೇಯರ್
ರೇಣುಕಾಬಾಯಿ ಅವರು ನಗರದ 8ನೇ ಮೇಯರ್ (ಇಬ್ಬರು ಪ್ರಭಾರಿಗಳನ್ನು ಬಿಟ್ಟು). ಪಾಲಿಕೆ ರಚನೆಯಾದ ನಂತರದ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತ ಗಳಿಸಿತ್ತು. 36 ಕಾಂಗ್ರೆಸ್, ಮೂವರು ಪಕ್ಷೇತರರು (ಅವರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ), ಒಬ್ಬ ಬಿಜೆಪಿ ಹಾಗೂ ಒಬ್ಬ ಸಿಪಿಐ ಸದಸ್ಯರು ಆಯ್ಕೆಯಾಗಿದ್ದಾರೆ.
ನಗರದ ಅಭಿವೃದ್ಧಿಗೆ ಶ್ರಮ
ಜಿಲ್ಲೆಯ ಪಕ್ಷದ ವರಿಷ್ಠರ, ಸದಸ್ಯರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.
– ರೇಣುಕಾಬಾಯಿ, ನೂತನ ಮೇಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.