ADVERTISEMENT

ನೀರಿನಿಂದಲೇ ದೀಪ ಬೆಳಗಿಸುವ ಪವಾಡ

ವೈಭವದ ನೀರಭತ್ತೇಶ್ವರ ಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 9:14 IST
Last Updated 20 ಮಾರ್ಚ್ 2018, 9:14 IST
ಮಾಯಕೊಂಡ ಸಮೀಪದ ದೊಡ್ಡ ಮಾಗಡಿಯಲ್ಲಿ ಶನಿವಾರ ರಾತ್ರಿ ನೀರಭತ್ತೇಶ್ವರ ಸ್ವಾಮಿ ಜಾತ್ರೆಯ ಪ್ರಯುಕ್ತ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಮಾಯಕೊಂಡ ಸಮೀಪದ ದೊಡ್ಡ ಮಾಗಡಿಯಲ್ಲಿ ಶನಿವಾರ ರಾತ್ರಿ ನೀರಭತ್ತೇಶ್ವರ ಸ್ವಾಮಿ ಜಾತ್ರೆಯ ಪ್ರಯುಕ್ತ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.   

ಮಾಯಕೊಂಡ: ಸಮೀಪದ ದೊಡ್ಡ ಮಾಗಡಿಯಲ್ಲಿ ಶನಿವಾರ ನೀರಭತ್ತೇಶ್ವರ ಸ್ವಾಮಿ ಜಾತ್ರೆ ನೆರವೇರಿತು. ನೀರಿನಲ್ಲಿ ದೀಪ ಬೆಳಗುವ ಪವಾಡ ವೀಕ್ಷಿಸಲು ನೂರಾರು ಭಕ್ತರು ಸೇರಿದ್ದರು.

ಪೂಜಾರಪ್ಪ ಗುರುವಾರ ದೇವಾಲಯ ಪ್ರವೇಶಿಸಿ ಉಪವಾಸ ಆರಂಭಿಸುವುದರೊಂದಿಗೆ ಸಂಪ್ರದಾಯದಂತೆ ಜಾತ್ರೆ ಆರಂಭಗೊಂಡಿತ್ತು.

ಮಾಯಕೊಂಡದ ಆಂಜನೇಯ ಸ್ವಾಮಿ, ದಿಂಡದಹಳ್ಳಿ ಕ್ಯಾತಲಿಂಗೇಶ್ವರ ಸ್ವಾಮಿಯನ್ನು ಉರುಮೆ, ನಗಾರಿ ವಾದ್ಯ ಸಮೇತ ಸಂಪ್ರದಾಯದಂತೆ ಆಹ್ವಾನಿಸಲಾಯಿತು. ದೊಡ್ಡ ಮಾಗಡಿ ಮತ್ತು ಮಾಯಕೊಂಡದ ಮಧ್ಯೆ ದಿಂಡದಹಳ್ಳಿ ಕ್ಯಾತಲಿಂಗೇಶ್ವರ ಸ್ವಾಮಿ, ಮಾಯಕೊಂಡದ ಆಂಜನೇಯ
ಸ್ವಾಮಿ ಮತ್ತು ದೊಡ್ಡ ಮಾಗಡಿಯ ನೀರಭತ್ತೇಶ್ವರ ಸ್ವಾಮಿಯ ಅಶ್ವತೇಜಮೂರ್ತಿಗಳನ್ನು ಹೊತ್ತು, ಸಂಪ್ರದಾಯದಂತೆ ಭೇಟಿ ನಡೆಸಲಾಯಿತು.

ADVERTISEMENT

ನೀರಭತ್ತೇಶ್ವರ ಸ್ವಾಮಿಯ ಹೊಳೆಪೂಜೆ ನಡೆಸಿ, ಮಣೇವು ಆಡಿಸಿ, ಮಡಿಯಿಂದ ಜಲ ತರಲಾಯಿತು. ನೀರಿನಲ್ಲಿ ಹಣತೆ ಹಚ್ಚಿಕೊಂಡು ಪೂಜಾರಪ್ಪ
ದೇವಸ್ಥಾನ ಪ್ರದಕ್ಷಿಣೆ ಹಾಕುವುದರೊಂದಿಗೆ ಪವಾಡ ನಡೆಸಲಾಯಿತು.

ಹರಕೆ ಹೊತ್ತ ಭಕ್ತರು ಉರುಳು ಸೇವೆ ಸಲ್ಲಿಸಿದರು. ನಾಸಿಕ್ ಡೋಲು ಕುಣಿತಕ್ಕೆ ಯುವಕರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಗೌಡರ ಜಯಪ್ರಕಾಶ್ ಕುಟುಂಬದಿಂದ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನ ಮತ್ತು ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ
ಮಾಡಲಾಗಿತ್ತು. ಮಾಗಡಿ, ಮಾಯಕೊಂಡ, ಅಣ್ಣಾಪುರ, ದಿಂಡದಹಳ್ಳಿ, ನರಗನಹಳ್ಳಿ, ಪರುಶುರಾಂಪುರ ಸೇರಿ ಅನೇಕ ಗ್ರಾಮಗಳ ಭಕ್ತರು ಬಂದಿದ್ದರು.

**

ಪವಾಡದ ಹಿಂದಿನ ಐತಿಹ್ಯ
ನೀರಭತ್ತೇಶ್ವರ ಸ್ವಾಮಿಯ ಅನನ್ಯ ಭಕ್ತೆಯಾಗಿದ್ದ ಬಡ ವೃದ್ಧೆಯೊಬ್ಬಳು ದೀಪ ಹಚ್ಚಲು ಎಣ್ಣೆಯಿಲ್ಲದೇ ಚಿಂತಿತಳಾಗಿ ನೀರಭತ್ತೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿದಳು. ಆಗ ‘ನೀರಿನಿಂದಲೇ ದೀಪ ಹಚ್ಚು, ಹಣತೆ ಬೆಳಗುತ್ತದೆ’ ಎಂದು ಅಶರೀರವಾಣಿ ಆಯಿತು. ವೃದ್ಧೆ ನೀರಿನಿಂದ ಹಣತೆ ಹಚ್ಚಿದಾಗ ದೀಪ ಬೆಳಗಿತು. ಈ ಐತಿಹ್ಯದಂತೆ ಇಂದಿಗೂ ಈ ಜಾತ್ರೆಯಲ್ಲಿ ನೀರಿನಿಂದಲೇ ದೀಪ ಬೆಳಗಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.