ಮಲೇಬೆನ್ನೂರು: ಇಲ್ಲಿನ ನೆಮ್ಮದಿ ಕೇಂದ್ರ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿದ ಜನತೆ, ರೈತರು ಹಾಗೂ ವಿದ್ಯಾರ್ಥಿಗಳು ಬಲವಂತವಾಗಿ ಬಾಗಿಲು ಮುಚ್ಚಿಸಿ ರಸ್ತೆ ತಡೆ ನಡೆಸಿದ ಘಟನೆ ಮಂಗಳವಾರ ಜರುಗಿತು.
ಉನ್ನತ ವಿದ್ಯಾಭ್ಯಾಸ, ಶಾಲಾ ಕಾಲೇಜಿಗೆ ಸೇರ ಬಯಸುವ ವಿದ್ಯಾರ್ಥಿವೃಂದ ಆದಾಯ, ಜಾತಿ ಪ್ರಮಾಣ ಪತ್ರ ಪಡೆಯಲು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು.
ಪಡಿತರಚೀಟಿ, ವೃದ್ಧಾಪ್ಯ ವೇತನಕ್ಕೆ ಅರ್ಜಿಸಲ್ಲಿಸುವವರು ಹಾಗೂ ಪಹಣಿ ಪಡೆಯಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ನೆಮ್ಮದಿ ಕೇಂದ್ರದ ಏಕಮಾತ್ರ ಸಿಬ್ಬಂದಿ ಎಂದಿನಂತೆ ಕಚೇರಿ ಆರಂಭಿಸಿದರು. ಆದರೆ, ಸ್ವಲ್ಪ ಹೊತ್ತಿನಲ್ಲಿ ವಿದ್ಯುತ್‌ಪೂರೈಕೆ ಸ್ಥಗಿತವಾಯಿತು.
ಉಪಸ್ಥಿತ ವಿದ್ಯಾರ್ಥಿಗಳು ಪದವಿ, ಡಿಪ್ಲೊಮಾ ತರಗತಿ ಸೇರಲು ಜೂನ್ 15 ಅಂತಿಮ ದಿನ ಎಂದು ಆತಂಕ ವ್ಯಕ್ತಪಡಿಸಿದರು.
ರೈತರು ಸ್ಥಳಕ್ಕಾಗಮಿಸಿ ನೆಮ್ಮದಿ ಕೇಂದ್ರಕ್ಕೆ ಒಂದು ಗಣಕಯಂತ್ರ, ಪ್ರಿಂಟರ್ ಪೂರೈಸಿದ್ದಾರೆ. ಚಿಕ್ಕ ಯುಪಿಎಸ್‌ನಿಂದ ಪ್ರಯೋಜನವಿಲ್ಲ ಎಂದು ಸಮಸ್ಯೆಯನ್ನು ತಹಶೀಲ್ದಾರ್ ಗಮನಕ್ಕೆ ತಂದರು.
ಸ್ವಲ್ಪ ಸಮಯದಲ್ಲಿ ನೆಮ್ಮದಿ ಕೇಂದ್ರ ಜಿಲ್ಲಾ ಮುಖ್ಯಸ್ಥರು ಬಂದು ಸಮಸ್ಯೆ ಪರಿಹರಿಸುತ್ತಾರೆ ಎಂಬ ಆಶ್ವಾಸನೆ ನೀಡಿ 2 ಗಂಟೆ ಕಳೆದರೂ ಯಾರೂ ಬರಲಿಲ್ಲ. ರೈತರ ಸಹನೆ ಮೀರಿ ರಸ್ತೆ ತಡೆ ಆರಂಭಿಸಿದರು. ಸುಮಾರು ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತವಾಗಿತ್ತು. ಪಿಎಸ್‌ಐ ರಮೇಶ್ ಆಗಮಿಸಿ ಸಮಸ್ಯೆ ಕುರಿತು ಧರಣಿ ನಿರತರ ಮನವೊಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಉಪ ತಹಶೀಲ್ದಾರ್ ರೆಹಾನ್ ಪಾಶಾ, ಗ್ರಾಮ ಲೆಕ್ಕಾಧಿಕಾರಿ ಭಕ್ತವತ್ಸಲ ಇದ್ದರು.
ನಂತರ ತಹಶೀಲ್ದಾರ್ ಜಿ. ನಜ್ಮಾ ನೆಮ್ಮದಿ ಕೇಂದ್ರದ ದಾವಣಗೆರೆ ಜಿಲ್ಲಾ ವ್ಯವಸ್ಥಾಪಕ ಕೆ.ಎಂ. ಉಮೇಶ್ ಅವನ್ನು ಕರೆಸಿ, ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು. ಬುಧವಾರದಿಂದ ಇನ್ನೊಂದು ಗಣಕ ಯಂತ್ರ, ಹೆಚ್ಚಿನ ಪ್ರಮಾಣದ ಯುಪಿಎಸ್ ಒದಗಿಸುವ ಭರವಸೆ ನೀಡಿದ ನಂತರ ಕೇಂದ್ರ ಪುನರಾರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.