ADVERTISEMENT

ನ್ಯಾಯಬೆಲೆ ಅಂಗಡಿ ಅಮಾನತು

ರೂ 1.30ಕ್ಕೆ ಅಕ್ಕಿ ಮಾರಾಟ ಹಿನ್ನೆಲೆಯಲ್ಲಿ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 10:24 IST
Last Updated 16 ಜುಲೈ 2013, 10:24 IST

ದಾವಣಗೆರೆ: ರಾಜ್ಯ ಸರ್ಕಾರ ಜಾರಿಗೊಳಿಸಿರುವ `ಅನ್ನಭಾಗ್ಯ' ಯೋಜನೆಯ ಅಡಿ ರೂ 1ರ ಬದಲಿಗೆ ರೂ 1.30ಕ್ಕೆ ಕೆ.ಜಿ. ಅಕ್ಕಿ ಮಾರಾಟ ಮಾಡುತ್ತಿದ್ದ ನಗರದ ಬೇತೂರು ರಸ್ತೆಯಲ್ಲಿರುವ ಭಾರತ್ (ಮೇನ್) ನ್ಯಾಯಬೆಲೆ ಅಂಗಡಿಯನ್ನು ಅಮಾನತುಪಡಿಸಲಾಗಿದೆ.

ಸರ್ಕಾರ ನಿಗದಿಪಡಿಸಿರುವುದಕ್ಕಿಂತ 30 ಪೈಸೆ ಹೆಚ್ಚುವರಿಯಾಗಿ ಪಡೆಯುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಇಲಾಖೆಯ ಸಹಾಯಕ ನಿರ್ದೇಶಕರಿಂದ ತನಿಖೆ ನಡೆಸಲಾಯಿತು. 30 ಪೈಸೆ ಹೆಚ್ಚಾಗಿ ಪಡೆಯುತ್ತಿದ್ದುದು ಹಾಗೂ ತೂಕದಲ್ಲಿ ಕಡಿಮೆ ಪ್ರಮಾಣದಲ್ಲಿ ನೀಡಿದ್ದು ತಿಳಿದುಬಂದ ಹಿನ್ನೆಲೆಯಲ್ಲಿ ಅಂಗಡಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಇದೇ ರೀತಿ, ಚಿಲ್ಲರೆ ಸೀಮೆಎಣ್ಣೆ ವಿತರಕ ಅನ್ವರ್‌ಸಾಬ್ ಅವರು ದೇವರಾಜ ನಗರ ಶಾಖೆ-2ರ ಸೊಸೈಟಿಯ ವ್ಯಾಪ್ತಿಯಲ್ಲಿ ಬರುವ ರಾಮಕೃಷ್ಣ ಹೆಗಡೆ ನಗರ ಮತ್ತು ಮುಸ್ತಪಾ ನಗರದ ಕಾರ್ಡ್‌ದಾರರಿಗೆ ಸರಿಯಾಗಿ ಸೀಮೆಎಣ್ಣೆ ವಿತರಿಸಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಚಿಲ್ಲರೆ ಸೀಮೆಎಣ್ಣೆ ಅನುಮತಿ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮುಂದೆ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳು ಸರ್ಕಾರ ನಿಗದಿಪಡಿಸಿದ ದರ ಮತ್ತು ಪ್ರಮಾಣದಲ್ಲಿ ಪಡಿತರ ವಿತರಿಸಬೇಕು ಎಂದು ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.