ADVERTISEMENT

ಪಠ್ಯೇತರ ಚಟುವಟಿಕೆ ವಿಷಯ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:25 IST
Last Updated 24 ಫೆಬ್ರುವರಿ 2011, 9:25 IST

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ  ಕಡ್ಡಾಯವಾಗಿ ಪಠ್ಯೇತರ ಚಟುವಟಿಕೆ ವಿಷಯ ಅಳವಡಿಸಲು ಸರ್ಕಾರ ಕ್ರಿಯಾಯೋಜನೆ ರೂಪಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬೆಳಶೆಟ್ಟಿ ಹೇಳಿದರು.ನಗರದಲ್ಲಿ ಬುಧವಾರ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಮ್ಮಿಕೊಂಡಿದ್ದ ಸ್ಕೌಟ್ ಸಂಸ್ಥೆ ಸಂಸ್ಥಾಪಕ ಬೇಡನ್ ಪೊವೆಲ್ ದಂಪಯ 155ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.

ಇದೇ ದಿಸೆಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ವಿಸ್ತರಣೆ ಹಾಗೂ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಪ್ರಯತ್ನ ಮಾಡಲಾಗುವುದು. ಸಂಸ್ಥೆಯ ಪೂರಕ ಮಾಹಿತಿಗಳನ್ನು ನೀಡಿದರೆ, ಅದನ್ನು ಕರಪತ್ರಗಳನ್ನು ಮಾಡಿ ಪ್ರತಿ ಶಾಲೆಗೆ ಹಂಚಲಾಗುವುದು. ಜತೆಗೆ, ಶಾಲೆಗಳಲ್ಲಿ ಘಟಕಗಳನ್ನು ಹೆಚ್ಚಿಸುವ ಉದ್ದೇಶದಿಂದ ಸಭೆ ಮಾಡುವುದಾಗಿ ಹೇಳಿದರು.

ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಬೆಳೆಸಲು ಮತ್ತು ಅವರ ಉತ್ತಮ ಭವಿಷ್ಯಕ್ಕೆ ಸಹಕಾರಿ. ಅಲ್ಲದೇ, ಶ್ರಮ, ಸಾಮಾಜಿಕ ಕಳಕಳಿ ಮೂಡಿಸುತ್ತದೆ ಎಂದರು.ಜಿಲ್ಲೆಯಲ್ಲಿ ಸುಮಾರು 19ಸಾವಿರ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಶಾಲೆಗಳಲ್ಲಿ 400ಕ್ಕೂ ಹೆಚ್ಚು ಘಟಕಗಳಿವೆ. ಇದು ಶಿಕ್ಷಣ ಇಲಾಖೆಗೆ ನೀಡಿದ ನಿಜವಾದ ಕೊಡುಗೆ. ದಾವಣಗೆರೆ ಜಿಲ್ಲೆ ಸ್ಕೌಟ್‌ನಲ್ಲಿ ರಾಜ್ಯದಲ್ಲೇ ಉತ್ತಮ ಹೆಸರು ಮಾಡಿದೆ. ಅದನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸ್ಕೌಟ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ, ಶಿಕ್ಷಣ ಇಲಾಖೆಯ ವಿಷಯಾಧಾರಿತ ಅಧಿಕಾರಿ ಕೆ.ಎಂ. ರಾಮಚಂದ್ರಪ್ಪ, ಸ್ಕೌಟ್ ಉಪಾಧ್ಯಕ್ಷೆ ಶಾಂತಾ ಯಾವಗಲ್, ಜಿಲ್ಲಾ ಕಾರ್ಯದರ್ಶಿ ಷಡಾಕ್ಷರಪ್ಪ, ಕೋಶಾಧಿಕಾರಿ ಬಾದಾಮಿ ರುದ್ರೇಶ್, ಕೇಂದ್ರ ಕಚೇರಿ ಆಯುಕ್ತೆ ನೀಲಾಕುಮಾರಿ, ಪುಟ್ಟಮ್ಮ ಮಹಾರುದ್ರಯ್ಯ, ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಸಂಸ್ಥೆ ಅಧ್ಯಕ್ಷ ಮಹಮದ್ ವಾಸಿಲ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.