ADVERTISEMENT

ಪವಾಡ ವೈಭವೀಕರಿಸುವ ದೃಶ್ಯ ಮಾಧ್ಯಮ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 10:20 IST
Last Updated 6 ಫೆಬ್ರುವರಿ 2012, 10:20 IST

ಜಗಳೂರು: ಇಂದಿನ ದೃಶ್ಯ ಮಾಧ್ಯಮಗಳು ಜ್ಯೋತಿಷ, ಪವಾಡದಂತಹ ಮೂಢನಂಬಿಕೆಗಳಿಗೆ ಮಹತ್ವ ನೀಡುತ್ತಿದ್ದು, ಇದರಿಂದ ಸಮಾಜದಲ್ಲಿ ಅಜ್ಞಾನ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ  ಪರಿಷತ್ತಿನ ಜಿಲ್ಲಾ ಸಂಯೋಜಕ ಎಂ. ಗುರುಸಿದ್ದಸ್ವಾಮಿ ಹೇಳಿದರು.

ಪಟ್ಟಣದ ಎನ್‌ಎಂಕೆ ಪ್ರೌಢಶಾಲೆಯಲ್ಲಿ ಈಚೆಗೆ ವಿಜ್ಞಾನ ಕ್ಲಬ್ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ `ಪವಾಡ ಗುಟ್ಟು ಬಯಲು~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2012ರಲ್ಲಿ ಪ್ರಪಂಚ ಪ್ರಳಯ ಆಗುತ್ತದೆ ಎಂದು ಹಲವು ಜ್ಯೋತಿಷಿಗಳು ಸುಳ್ಳು ಹೇಳುತ್ತಿರುವುದನ್ನು ಯಾರೂ ನಂಬುವ ಅಗತ್ಯವಿಲ್ಲ. ಚಲನೆ ನಿಯಮದ ಮೇಲೆ ನಿಂತಿರುವ ಭೂಮಿ, ಸೂರ್ಯ ಇರುವವರೆಗೂ ಅಸ್ತಿತ್ವದಲ್ಲಿರುತ್ತದೆ. ಚಲನೆ ನಿರಂತರವಾಗಿದ್ದು, ಪ್ರಳಯ ಎನ್ನುವುದು ಕೆಲವರ ಸೃಷ್ಟಿಯಷ್ಟೆ. ಇಂತಹ ಮೂಢ ಹೇಳಿಕೆಗಳಿಗೆ ಮಾಧ್ಯಮಗಳು ಪ್ರಾಧಾನ್ಯತೆ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಕ್ಕಳು ಸೇರಿದಂತೆ ಎಲ್ಲರೂ ಸಸಿ ನೆಡುವ ಮೂಲಕ ತಮ್ಮ  ಹುಟ್ಟುಹಬ್ಬ ಆಚರಿಸಬೇಕು. 3 ಮರಗಳು ಒಬ್ಬ ಮನುಷ್ಯನಿಗೆ ಜೀವಿತಾವಧಿಯವರೆಗೆ ಬೇಕಾದ ಆಮ್ಲಜನಕ ನೀಡುತ್ತವೆ. ಪ್ರತಿ ಶಾಲೆಯಲ್ಲಿ ವಿಜ್ಞಾನ ಸಂಘಗಳನ್ನು ಪ್ರಾರಂಭಿಸಬೇಕು ಎಂದು ವಿಜ್ಞಾನ ಉಪನ್ಯಾಸಕ ಎಂ.ಎನ್. ಮುಸ್ಟೂರಪ್ಪ ಹೇಳಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಚಾಲಕ ಎಲ್.ಪಿ. ಸುಭಾಷ್‌ಚಂದ್ರ ಮಾತನಾಡಿ, ಹೋಮ-ಹವನ, ಯಜ್ಞ-ಯಾಗಾದಿಗಳಿಂದ ದೋಷ ಪರಿಹಾರ ಸಾಧ್ಯ ಎನ್ನುವ ಕೆಲವು ಸ್ವಾಮೀಜಿಗಳ ಹೇಳಿಕೆ ಅವೈಜ್ಞಾನಿಕ. ಜಗತ್ತಿನ ವಿಕಾಸವನ್ನು ವಿವರಿಸುವ ಡಾರ್ವಿನ್, ನ್ಯೂಟನ್, ಐನ್‌ಸ್ಟೀನ್, ಕಲಾಂ ಮುಂತಾದ ಸಾಧಕರ ಸಂಶೋಧನೆಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮೂಲಕ ವೈಚಾರಿಕ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದರು.

ಪವಾಡ ಗುಟ್ಟು ಬಯಲು: ಮೈಮೇಲೆ ಬೆಂಕಿ ಹಚ್ಚಿಕೊಳ್ಳುವುದು, ಮುಳ್ಳಿನ ಪಾದರಕ್ಷೆಗಳ ಮೇಲೆ ನಿಲ್ಲುವುದು, ಕೈ ಬಣ್ಣ ಕೆಂಪಾಗುವುದು, ಶೂನ್ಯದಿಂದ ಅಗ್ನಿ ಸೃಷ್ಟಿ ಮುಂತಾದ ಪವಾಡ ಕ್ರಿಯೆಗಳ ಹಿಂದಿನ ರಹಸ್ಯವನ್ನು ಗುರುಸಿದ್ದಸ್ವಾಮಿ ಅವರು ಈ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಎನ್‌ಎಂಕೆ ಶಾಲೆಯ ಕಾರ್ಯದರ್ಶಿ ಎನ್.ಎಂ. ಲೋಕೇಶ್, ಅಧ್ಯಕ್ಷ ಹಾಲಸ್ವಾಮಿ, ಖಗೋಳತಜ್ಞ ಎಚ್.ಎಸ್.ಟಿ. ಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.