ADVERTISEMENT

ಬಂಜಾರ ಸಮುದಾಯದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 5:40 IST
Last Updated 26 ಜೂನ್ 2012, 5:40 IST
ಬಂಜಾರ ಸಮುದಾಯದ ಬೃಹತ್ ಪ್ರತಿಭಟನೆ
ಬಂಜಾರ ಸಮುದಾಯದ ಬೃಹತ್ ಪ್ರತಿಭಟನೆ   

ದಾವಣಗೆರೆ: ಪರಿಶಿಷ್ಟರ ಒಳಮೀಸಲಾತಿಗೆ ಶಿಫಾರಸು ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಬಂಜಾರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಪರಿಶಿಷ್ಟ ಜಾತಿ ಮತ್ತು ಉಪ ಜಾತಿಗಳ ಬಗ್ಗೆ ಯಾವುದೇ ನ್ಯಾಯಸಮ್ಮತ ಸಮೀಕ್ಷೆ ಮಾಡದೇ ಅನ್ಯಮಾರ್ಗದಿಂದ ಅಂಕಿ-ಅಂಶ ಸಂಗ್ರಹಿಸಿದೆ. ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿಯ ಎಡಗೈಯವರಿಗೆ ಶೇ 6, ಬಲಗೈಯವರಿಗೆ ಶೇ 5, ಸ್ಪೃರ್ಶ ಜಾತಿಗಳಿಗೆ ಶೇ 3 ಹಾಗೂ ಇತರ ಜಾತಿಗಳಿಗೆ ಶೇ 1 ಎಂದು ವಿಂಗಡಿಸಿ ಒಳಮೀಸಲಾತಿಗೆ ತಾವೇ ಸ್ವತಃ ಶಿಫಾರಸು ಮಾಡಿದ್ದಾರೆ.

ಇಂಥ ವರದಿಯಿಂದಾಗಿ ಬಡ, ನಿರ್ಗತಿಕ ಲಂಬಾಣಿ ಸಮುದಾಯಕ್ಕೆ ಕಾನೂನಾತ್ಮಕವಾಗಿ ಅನ್ಯಾಯವಾಗಿದೆ. ಆದ್ದರಿಂದ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಸಂಪೂರ್ಣ ತಿರಸ್ಕರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ಬಂಜಾರ ಸಮುದಾಯದವರು, ಸರ್ಕಾರ ಹಾಗೂ ಸದಾಶಿವ ಆಯೋಗದ ವಿರುದ್ಧ ಘೋಷಣೆ ಕೂಗಿದರು. ಕೆಲವು ಕಾಲ ಗಾಂಧಿ ವೃತ್ತದಲ್ಲಿ ಸೇರಿ ರಸ್ತೆತಡೆ ಮಾಡಿದರು. ಅಲ್ಲಿಂದ ಪಿಬಿ ರಸ್ತೆಯಲ್ಲಿ ಮೆರವಣಿಗೆ ಮೂಲಕ ಆಗಮಿಸಿದರು. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸಿದ ಮಹಿಳೆಯರು, ವೇಷಧಾರಿ ಬಾಲಕರು ಪಾಲ್ಗೊಂಡಿದ್ದರು.

ಮೆರವಣಿಗೆಯಿಂದಾಗಿ ನಗರದ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಯಿತು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಅಲ್ಲಿಯೂ ಘೋಷಣೆ ಕೂಗಿದರು. ಡಿಸಿ ಕಚೇರಿ ಆವರಣದ ಗೇಟು ತೆರೆದು ದಿಢೀರನೆ ಒಳನುಗ್ಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಆಯೋಗದ ವರದಿಗಳು ಹೈಕೋರ್ಟ್ ತೀರ್ಪು ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ.
 
ಈ ವರದಿಯಲ್ಲಿ ರಾಜ್ಯದ ಬಹುದೊಡ್ಡ ಸಮುದಾಯವನ್ನು ಅಲಕ್ಷ್ಯ ಮಾಡಲಾಗಿದೆ. ಲಂಬಾಣಿ ಜನಾಂಗವನ್ನು ಮತ್ತೊಂದು ರೀತಿಯಲ್ಲಿ ಶೋಷಣೆಗೆ ಒಳಪಡಿಸಲಾಗುತ್ತಿದೆ. ಆದ್ದರಿಂದ ಪರಿಶಿಷ್ಟರಲ್ಲೇ ಒಡಕು ಹುಟ್ಟುಹಾಕುವ ಈ ಒಳಮೀಸಲಾತಿ ಬೇಡ. ಈಗಾಗಲೇ ಸಂವಿಧಾನದಲ್ಲಿ ನೀಡಿರುವಂತೆ ಮೀಸಲಾತಿಗಳು ಯಥಾವತ್ತಾಗಿ ಮುಂದುವರಿಯಬೇಕು ಎಂದು ಒತ್ತಾಯಿಸಿದರು.

ಶಾಸಕ ಎಂ. ಬಸವರಾಜ ನಾಯ್ಕ ನೇತೃತ್ವದಲ್ಲಿ  ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಸ್. ವಿಜಯ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಸಮಿತಿಯ ಗೌರವಾಧ್ಯಕ್ಷ ಎನ್. ಜಯದೇವ ನಾಯ್ಕ, ಹೋರಾಟ ಸಮಿತಿಯ ಸಂಚಾಲಕ ರಾಘವೇಂದ್ರ ನಾಯ್ಕ, ಹರಪನಹಳ್ಳಿಯ ಎಂ.ಪಿ. ನಾಯ್ಕ, ಕೆ. ಮಂಜಾ ನಾಯ್ಕ, ನರೇನಹಳ್ಳಿ ಅರುಣ್‌ಕುಮಾರ್, ಡಾ.ಈಶ್ವರನಾಯ್ಕ ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.