ನ್ಯಾಮತಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಂಡಿಸುವ ಬಜೆಟ್‌ನ ಅನುಷ್ಠಾನ ಎಷ್ಟರಮಟ್ಟಿಗೆ ಕಾರ್ಯಗತವಾಗಿದೆ ಎಂಬುದನ್ನು ಮಾಧ್ಯಮಗಳು ವರದಿ ಮಾಡಬೇಕು ಎಂದು ಅರ್ಥಶಾಸ್ತ್ರಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಅರ್ಥಶಾಸ್ತ್ರ ವೇದಿಕೆಯಿಂದ ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಒಂದು ನೋಟ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸ್ವಾತಂತ್ರ್ಯ ಪಡೆದ ನಂತರ 1947ರಲ್ಲಿ ಕೆ. ಆರ್. ಷಣ್ಮುಗಂ ಶೆಟ್ಟಿ ಮಂಡಿಸಿದ ಮೊದಲನೇ ಬಜೆಟ್ ಸಹ 9.77 ಲಕ್ಷ ಕೋಟಿ ಕೊರತೆ ಬಜೆಟ್ ಆಗಿದ್ದಿತು. ನಂತರದ ವರ್ಷಗಳಲ್ಲಿ ಆಗಿಂದಾಗ್ಗೆ ಕೊರತೆ ಬಜೆಟ್ ಮಂಡಿಸುತ್ತಿರುವುದರಿಂದ ದೇಶದ ಆರ್ಥಿಕ ವಲಯದಲ್ಲಿ ಹಣದುಬ್ಬರ ಉಂಟಾಗುತ್ತಿದೆ ಎಂದರು.
ಗೊತ್ತು ಗುರಿ ಇಲ್ಲದ ಸಬ್ಸಿಡಿ ಹಾಗೂ ದೇಶದ ಸಾಲಗಳ ಬಡ್ಡಿಗಳು ಹಾಗೂ ಕಚ್ಚಾ ಪೆಟ್ರೋಲಿಯಂ ಬೆಲೆಯಲ್ಲಿ ಹೆಚ್ಚಳ ಸೇರಿಕೊಂಡಂತೆ ಮುಂದಿನ ವರ್ಷದಲ್ಲಿ ಹಣದುಬ್ಬರ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಬಿ. ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರ್ಥಶಾಸ್ತ್ರ ಅಧ್ಯಾಪಕ ಡಾ.ಕೆ. ಆರ್. ಭೋಗೇಶ್ವರಪ್ಪ ಪ್ರಾಸ್ತಾವಿಕ ಮಾತನಾಡಿದರು.
ಡಾ.ದಾಕ್ಷಾಯಣಮ್ಮ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಹನಾ ಪ್ರಾರ್ಥಿಸಿದರು, ಎಚ್. ಹನುಮಂತಪ್ಪ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.