ADVERTISEMENT

ಬಣ್ಣದ ರಂಗಿನಲ್ಲಿ ಮಿಂದೆದ್ದ ದಾವಣಗೆರೆ

ಮೇರೆ ಮೀರಿದ ಉತ್ಸಾಹ; ಯುವಜನರ ಸಂಭ್ರಮೋಲ್ಲಾಸ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 5:30 IST
Last Updated 18 ಮಾರ್ಚ್ 2014, 5:30 IST

ದಾವಣಗೆರೆ: ಬಹುತೇಕರ ಮುಖ, ತಲೆ, ಬಟ್ಟೆಗಳ ಮೇಲೆಲ್ಲ ಬಣ್ಣದ ರಂಗು. ನಿರಂತರ ಹಾರ್ನ್‌ ಮಾಡುತ್ತಾ ದ್ವಿಚಕ್ರ ವಾಹನಗಳಲ್ಲಿ ಭರ್ರನೆ ಸುತ್ತಾಡುತ್ತಿದ್ದ ಯುವಕರ ದಂಡುಗಳು. ಅಲ್ಲಲ್ಲಿ ಗುಂಪು ಗುಂಪಾಗಿ ಸೇರಿ ಓಕುಳಿಯಾಟ. ಮೇರೆ ಮೀರಿದ ಉತ್ಸಾಹ. ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿದ್ದ ಅಂಗಡಿಮುಂಗಟ್ಟುಗಳು. ರಸ್ತೆಗಳ ಮೇಲೆಲ್ಲಾ ಬಣ್ಣಗಳ ರಂಗೋಲಿ. ಮನದ ತುಂಬೆಲ್ಲಾ ಸಂಭ್ರಮದ ಓಕುಳಿ.
– ನಗರದಲ್ಲಿ ಸೋಮವಾರ ಕಂಡುಬಂದ ದೃಶ್ಯಗಳಿವು.

ನಗರ ಹಾಗೂ ಜಿಲ್ಲೆಯ ಜನರು ಪರಸ್ಪರ ನೀರು, ಬಣ್ಣ, ಬಣ್ಣದ ನೀರು ಎರಚಾಡುತ್ತಾ, ಬಣ್ಣದ ಹಬ್ಬ ಹೋಳಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು.

ಬಣ್ಣದ ಲೋಕ... ಎಲ್ಲವೂ ಕಲರ್‌ಮಯ... ಇಡೀ ನಗರವೇ ಬಣ್ಣದಲ್ಲಿ ಮಿಂದೆದ್ದು ‘ಹೋಳಿ’ ಸಂಭ್ರಮಕ್ಕೆ ಸಾಕ್ಷಿಯಾಯಿತು. ಚಿಣ್ಣರು, ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು, ಪುರುಷರು ಎಂದು ಭೇದ–ಭಾವವಿಲ್ಲದೇ ಬಣ್ಣ ಎರಚಾಡಿ ಸಂಭ್ರಮಿಸಿದರು. ನೀರಾಟದಲ್ಲಿ ಮುಳುಗೆದ್ದರು.

ಒಬ್ಬರಿಗೊಬ್ಬರ ಮೇಲೆ ಬಣ್ಣ ಎರಚಾಡಿ ಹೋಳಿ ಶುಭಾಶಯ ವಿನಿಮಯ ಮಾಡಿಕೊಂಡರು. ಬಹುತೇಕ ಬಡಾವಣೆಗಳಲ್ಲಿ ಸ್ಥಳೀಯರು ಗುಂಪುಗುಂಪಾಗಿ ಸೇರಿ ಓಕುಳಿಯಾಡಿದರು.

ಯುವಕರು ಬಣ್ಣ ಮೆತ್ತಿಕೊಂಡು ದ್ವಿಚಕ್ರ ವಾಹನಗಳಲ್ಲಿ ‘ನಗರ ಪ್ರದಕ್ಷಿಣೆ’ ಹಾಕುತ್ತಿದ್ದುದು ಹಾಗೂ ದಾರಿಹೋಕರಿಗೂ ಬಣ್ಣ ಹಚ್ಚಿ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಶರ್ಟ್‌, ಟೀ ಶರ್ಟ್‌ ಕಳಚಿ ಸೊಂಟಕ್ಕೆ ಕಟ್ಟಿಕೊಂಡು ಓಡಾಡುತ್ತಿದ್ದರು. ಕೆಲವರು ಸ್ನೇಹಿತರು, ಪರಿಚಯಸ್ಥರ ತಲೆಗೆ ಮೊಟ್ಟೆ ಒಡೆದು ಹಚ್ಚುತ್ತಿದ್ದುದು ಕಂಡುಬಂದಿತು.

ನಗರದ ರಾಂ ಅಂಡ್‌ ಕೋ ವೃತ್ತದಲ್ಲಿ, ಯುವಕರು ಜಮಾಯಿಸಿ ಹೋಳಿಯನ್ನು ಅತ್ಯುತ್ಸಾಹದಿಂದ ಆಚರಿಸಿದರು. ಬಟ್ಟೆಗಳನ್ನು ಕಳಚಿ ಮೇಲೆ ಕಟ್ಟಿದ್ದ ಹಗ್ಗಕ್ಕೆ ನೇತು ಹಾಕಿದ್ದರು. ಬಣ್ಣದ ನೀರಿನಲ್ಲಿ ಮಿಂದರು, ನರ್ತಿಸಿದರು, ಬಂದಿದ್ದವರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ಅಲ್ಲಲ್ಲಿ ಕೆಲ ಗುಂಪುಗಳು ಎತ್ತರದಲ್ಲಿ ಮಡಕೆ ಕಟ್ಟಿ ಒಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದ್ವಿತೀಯ ಪಿಯು ಪರೀಕ್ಷೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹ ಬಣ್ಣದಾಟದಲ್ಲಿ ತೊಡಗಿದ್ದು ಕಂಡುಬಂದಿತು.
ಹಬ್ಬದ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ರಸ್ತೆಗಳಲ್ಲಿ, ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮಧ್ಯಾಹ್ನದ ನಂತರ ಪೊಲೀಸರು ಓಕುಳಿಯಾಟಕ್ಕೆ ಅವಕಾಶ ನೀಡಲಿಲ್ಲ.
ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆಲವು ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಯುವತಿಯರಿಗೆ ಕೀಟಲೆ!
ಹಬ್ಬದ ಸಂಭ್ರಮದಲ್ಲಿ ಬಣ್ಣ ಹಚ್ಚುವ ನೆಪದಲ್ಲಿ ಕೆಲ ಯುವಕರು, ಪಾದಚಾರಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದ ಯುವತಿಯರಿಗೆ ಕೀಟಲೆ ಮಾಡುತ್ತಿದ್ದುದು ಕಂಡುಬಂದಿತು. ಪ್ರತಿರೋಧದ ನಡುವೆಯೂ ಕೆಲವರು ಬಣ್ಣ ಹಚ್ಚುತ್ತಿದ್ದುದ್ದರಿಂದ ಯುವತಿಯರು, ವಿದ್ಯಾರ್ಥಿನಿಯರು ಕಿರಿಕಿರಿ ಅನುಭವಿಸಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.