ADVERTISEMENT

ಬರ ಘೋಷಣೆ ವಿಳಂಬ: ಅಧಿಕಾರಿಗಳ ಪ್ರಮಾದ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 8:00 IST
Last Updated 10 ಅಕ್ಟೋಬರ್ 2011, 8:00 IST

ಜಗಳೂರು: ಅಧಿಕಾರಿಗಳ ತಪ್ಪಿನಿಂದ ಸರ್ಕಾರ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸುವಲ್ಲಿ ಸ್ವಲ್ಪ ವಿಳಂಬ ಆಯಿತು ಎಂದು ಶಾಸಕ ಎಸ್.ವಿ. ರಾಮಚಂದ್ರ  ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ತಾಲ್ಲೂಕು ಎಸ್‌ಸಿ ಮೋರ್ಚಾ ಘಟಕದ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಹಾಗೂ ತಾವು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಹರಪನಹಳ್ಳಿ ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ಮಳೆಯ ಕೊರತೆಯಿಂದ ಆಗಿರುವ ನಷ್ಟದ ಬಗ್ಗೆ  ಮನದಟ್ಟು ಮಾಡಿದ್ದರಿಂದ ಎರಡೂ ತಾಲ್ಲೂಕುಗಳು ಬರಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.   ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬರ ಘೋಷಣೆ ಸ್ವಲ್ಪ ವಿಳಂಬವಾಗಿದ್ದ ಮಾತ್ರಕ್ಕೆ ಕೆಲಸವಿಲ್ಲದ ಕೆಲವು ಕಿಡಿಗೇಡಿಗಳು ನೀಡಿರುವ  ದುರುದ್ದೇಶಪೂರಿತ ಹೇಳಿಕೆಗಳ ಬಗ್ಗೆ  ನಾನು ತಲೆಕೆಡಿಸಿಕೊಳ್ಳುವುದಿಲ್ಲ. ರಾಜ್ಯ ಸರ್ಕಾರ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ  ಅ. 11ರಂದು  ಹಮ್ಮಿಕೊಂಡಿರುವ ಮಹತ್ವದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದು, ನನ್ನ ಜಾತಿ ಕುರಿತು ಅಪಪ್ರಚಾರ ಕೈಗೊಂಡವರಿಗೆ ಇದು ತಕ್ಕ ಉತ್ತರದಂತಿದೆ ಎಂದರು.

ಪಟ್ಟಣದಲ್ಲಿ ತಲಾ ್ಙ 25 ಲಕ್ಷ ವೆಚ್ಚದಲ್ಲಿ ಭೋವಿ, ಆದಿ ಜಾಂಬವ ಸಮುದಾಯ ಭವನ, ಪ್ರತಿ ಲಂಬಾಣಿ ತಾಂಡಾಗಳಲ್ಲಿ ಸಮುದಾಯ ಭವನ ಹಾಗೂ ಎಸ್‌ಸಿಪಿ ಯೋಜನೆ ಅಡಿ ಕಾಂಕ್ರಿಟ್ ರಸ್ತೆ  ನಿರ್ಮಿಸಲಾಗಿದೆ. ಗಂಗಾಕಲ್ಯಾಣ ಯೋಜನೆ ಅಡಿ ಕೊಳವೆಬಾವಿ ಕೊರೆಸಿ ತಳ ಸಮುದಾಯಗಳ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು  ವಿವರಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೌರ್ಯ ಮಾತನಾಡಿ, ಬಿಜೆಪಿ ಸರ್ಕಾರದ ಪ್ರಸ್ತುತ ವರ್ಷದ ಬಜೆಟ್‌ನಲ್ಲಿ ಎಸ್‌ಸಿ ಸಮುದಾಯ ಕಾರ್ಯಕ್ರಮಕ್ಕೆ ್ಙ 1300 ಕೋಟಿ ಹಾಗೂ  59 ಇಲಾಖೆಗಳಲ್ಲಿ ಎಸ್‌ಸಿಪಿ ಯೋಜನೆಗಳಿಗಾಗಿ ್ಙ 6 ಸಾವಿರ ಕೋಟಿ ಒದಗಿಸಲಾಗಿದೆ ಎಂದರು.

ಜಿ.ಪಂ.  ಸದಸ್ಯ ಎಚ್. ನಾಗರಾಜ್, ಬಿಜೆಪಿ ಅಧ್ಯಕ್ಷ ಎಸ್.ಕೆ. ಮಂಜುನಾಥ್,  ಶಿವಕುಮಾರಯ್ಯ, ವೆಂಕಟೇಶ್, ಇ.ಎನ್. ಪ್ರಕಾಶ್, ದಾಸಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.