ADVERTISEMENT

ಬರ ಪರಿಹಾರ; ಸಮರೋಪಾದಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 5:20 IST
Last Updated 17 ಜುಲೈ 2012, 5:20 IST

ದಾವಣಗೆರೆ: ಬರಗಾಲವನ್ನು  ಸಮರೋಪಾದಿಯಲ್ಲಿ ಎದುರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ರಾಜ್ಯ ಸರ್ಕಾರದ ನೂತನ ಸಂಪುಟದಲ್ಲಿ ಸಚಿವರಾಗಿ ಮುಂದುವರಿದ ಹಿನ್ನೆಲೆಯಲ್ಲಿ ನಡೆಸಲಾದ ಸನ್ಮಾನ ಸ್ವೀಕರಿಸಿ ಅವರು  ಮಾತನಾಡಿದರು.

ಸರ್ಕಾರ ಬರಗಾಲ ಎದುರಿಸಲು ಪ್ರಥಮಸಭೆಯಲ್ಲಿ ರೂ 350 ಕೋಟಿ ನೀಡಿದೆ. ಭದ್ರಾ ನಾಲೆಯಲ್ಲಿ ನೀರುಬಿಡಲು ಚಿಂತನೆ ನಡೆಸಲಾಗುತ್ತಿದೆ. ಸರ್ಕಾರದಲ್ಲಿ ಏಳು ಬೀಳುಗಳು ಸಾಮಾನ್ಯ, ಕೈಲಾದ ಕೆಲಸವನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುತ್ತೇನೆ ಎಂದರು.

ಇಂದಿರಾಗಾಂಧಿ ಅವರ ಕಾಲದಲ್ಲಿ ದೇಶದಾದ್ಯಂತ ಕಾಂಗ್ರೆಸ್ ಅಲೆ ಇದ್ದಾಗ ದೆಹಲಿಯಲ್ಲಿ ಕಾಂಗ್ರೆಸ್ ಬಂದಿರಲಿಲ್ಲ, ದಾವಣಗೆರೆಯಲ್ಲಿ ಮುಂದಿನ ಚುನಾವಣೆಯಲ್ಲಿ ಗ್ರಾಮಪಂಚಾಯ್ತಿ ಮಟ್ಟದಿಂದ ಹಿಡಿದು ಎಲ್ಲ ಸ್ಥಾನಗಳನ್ನು ಬಿಜೆಪಿ ಅಲಂಕರಿಸಲಿದೆ. ಕಾಂಗ್ರೆಸ್ ಶಾಸಕರು ತಮಗೆ ನಾಯಕತ್ವ ನೀಡಿದರೆ ರಾಜ್ಯದಲ್ಲಿ 150 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸಿ ಕೊಡುವುದಾಗಿ ಹೇಳುತ್ತಿದ್ದಾರೆ ಅದು ಅಸಾಧ್ಯ  ಎಂದು ಹೇಳಿದರು.

ವಿಧಾನ ಪರಿಷತ್ ಮುಖ್ಯ ಸಚೇತ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವದ ಸರ್ಕಾರದಿಂದ 3 ವರ್ಷದಲ್ಲಿ ದಾಖಲೆ ಮಾಡುವಂಥ ಆಡಳಿತ ನೀಡಿದ್ದಾರೆ. ಆದರೆ, ಅನಿವಾರ್ಯವಾಗಿ ಅವರು ಸ್ಥಾನ ಬಿಡಬೇಕಾಯಿತು. ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಸರ್ಕಾರ ಇನ್ನೇನು ಬಿದ್ದೇ ಹೋಗುತ್ತದೆ ಅಂದುಕೊಂಡಿದ್ದರು. ನಮ್ಮ ಸರ್ಕಾರದ ಏನೇ ಸಮಸ್ಯೆ ಇದ್ದರೂ ಅದು ಕೌಟುಂಬಿಕ ಕಲಹಗಳ ರೀತಿ ಅಷ್ಟೆ. ನಾಲ್ಕು ಗೋಡೆಗಳ ನಡುವೆ ಬಗೆಹರಿಸಿಕೊಳ್ಳುತ್ತೇವೆ.

ಪರಿವಾರದ ಮುಖಂಡರ ಮಾರ್ಗದರ್ಶನದಂತೆ ನಾವು ಜನಪರ ಆಡಳಿತ ನಡೆಸುತ್ತಿದ್ದೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಟಿ. ಗುರುಸಿದ್ಧನ ಗೌಡ್ರು ಮಾತನಾಡಿ, ಬಿಜೆಪಿಯಲ್ಲಿ ಯಾರು ಪಕ್ಷವನ್ನು ಬೆಳೆಸುತ್ತಾರೋ ಅವರನ್ನು ಪಕ್ಷ ಬೆಳೆಸುತ್ತದೆ. ಪಕ್ಷದ ಕಾರ್ಯಕರ್ತರು ಮಾನಸಿಕವಾಗಿ ಸೋಲಬಾರದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮಾಯಕೊಂಡ ಶಾಸಕ ಬಸವರಾಜ್ ನಾಯ್ಕ, ದೂಡಾ ಅಧ್ಯಕ್ಷ ಬಳ್ಳೆಕಟ್ಟೆ ಮಲ್ಲಿಕಾರ್ಜುನ, ಮೇಯರ್ ಸುಧಾಜಯರುದ್ರೇಶ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಯಶೋಧಮ್ಮ ಹಾಲೇಶಪ್ಪ, ವೈ. ಮಲ್ಲೇಶ್ ಹಾಜರಿದ್ದರು.
 

ಗುಳೆ ತಡೆಯಲು ಕ್ರಮ

ಗುಳೆ ಹೋಗುವ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆಲಸ ನೀಡಲಾಗುತ್ತದೆ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು. ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಹಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಎಸ್.ಎಂ. ಕೃಷ್ಣ ಕಾಲದಲ್ಲಿಯೂ ಬರಗಾಲವಿತ್ತು. ಅವರು ಮಾಡಿದ್ದು ಏನು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಅಧಿಕಾರ ಇಲ್ಲದಿದ್ದಾಗ ವಿರೋಧ ಮಾಡುವುದು ಸಾಮಾನ್ಯ ಸಂಗತಿ. ವಾಣಿಜ್ಯ ಬೆಳೆಗಳನ್ನು ಉತ್ತಮಗೊಳಿಸುವುದು ತಮ್ಮ ಕೆಲಸ. ಹೊಸ ಸರ್ಕಾರ ರೈತರು ಮತ್ತು ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಿದೆ ಎಂದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.