ADVERTISEMENT

ಬರ: ಯೋಜನೆ ಪರಿಣಾಮಕಾರಿ ಜಾರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:10 IST
Last Updated 14 ಅಕ್ಟೋಬರ್ 2011, 8:10 IST

ಜಗಳೂರು: ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬರದ  ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹೊಣೆ ಅಧಿಕಾರಿಗಳ ಮೇಲಿದೆ ಎಂದು ಜಿಲ್ಲಾ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಬಹುತೇಕ ಇಲಾಖೆ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ವಾಸಿಸುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲಿ ವಾಸವಾಗಿರುವ ಅಧಿಕಾರಿಗಳಿಂದಾಗಿ ಸರ್ಕಾರದ ಮಹತ್ವದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸಲು ಸಾಧ್ಯವಾಗದೆ ತಾಲ್ಲೂಕಿನ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ಇಲ್ಲದೆ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹಳೆಯ ಪೈಪ್‌ಲೈನ್‌ಗಳಿಂದಾಗಿ ಸಾಂಕ್ರಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಹಳೆಯ ಪೈಪ್‌ಲೈನ್‌ಗಳನ್ನು ಬದಲಿಸಿ ಸೂಕ್ತಕ್ರಮ ಕೈಗೊಳ್ಳಿ ಎಂದು ಜಯಲಕ್ಷ್ಮೀ ಮಹೇಶ್ ಸೂಚಿಸಿದರು.

ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯ್ತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಮುಂತಾದ ಯೋಜನೆಗಳಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಾ.ಪಂ. ಇಒ ಅವರನ್ನು  ಜಿ.ಪಂ. ಅಧ್ಯಕ್ಷರು ಪ್ರಶ್ನಿಸಿದರು.

`ಪಂಚಾಯ್ತಿಗೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗೆ ಸೇರಿದ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಕ್ರಮಗಳು ನಡೆದಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ. ಪ್ರಭುಸ್ವಾಮಿ ಸಭೆಯಲ್ಲಿ ಸ್ಪಷ್ಟಪಡಿಸಿದರು.

ತಾ.ಪಂ. ಅಧ್ಯಕ್ಷ ಬಿ.ಆರ್. ಅಂಜಿನಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮಾ ಸಿದ್ದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.