ADVERTISEMENT

ಬಿಜೆಪಿಗೆ ಬಂಡಾಯ, ಕಾಂಗ್ರೆಸ್‌ಗೆ ಸೋಮಾರಿತನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 6:21 IST
Last Updated 27 ಅಕ್ಟೋಬರ್ 2017, 6:21 IST

ದಾವಣಗೆರೆ: ಅನಾವೃಷ್ಟಿ, ಅತಿವೃಷ್ಟಿ ಎರಡನ್ನೂ ಕೆಲವೇ ತಿಂಗಳುಗಳ ಅಂತರದಲ್ಲಿ ಕಂಡ ಜಿಲ್ಲೆಯಲ್ಲಿ ಈಗ ‘ರಾಜಕೀಯ ಅತಿವೃಷ್ಟಿ’ ಆರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳ ಕಚೇರಿಗಳು ಈಗ ಚಟುವಟಿಕೆಗಳ ಕೇಂದ್ರಗಳಾಗಿವೆ. ಪಕ್ಷದ ಅಧ್ಯಕ್ಷರು ಸರಬರ ಸುತ್ತಿ ಸಂಘಟನೆ ಮಾಡುತ್ತಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 7 ಸ್ಥಾನ ಪಡೆದಿತ್ತು. ಇದರ ಹಿಂದಿನ ಚುನಾವಣೆಯಲ್ಲಿ ಫಲಿತಾಂಶ ತಿರುವು ಮುರುವು ಆಗಿತ್ತು. ಬಿಜೆಪಿಗೆ 7, ಕಾಂಗ್ರೆಸ್‌ಗೆ 1 ಸ್ಥಾನ ಸಿಕ್ಕಿತ್ತು. ಮುಂಬರುವ ಚುನಾವಣೆಯಲ್ಲಿ ಇತಿಹಾಸ ಮರುಕಳಿಸುತ್ತದೆಂಬ ನಿರೀಕ್ಷೆ ಬಿಜೆಪಿಗೆ; ಇದು ಸಾಧ್ಯವಿಲ್ಲ ಎನ್ನುವ ವಿಶ್ವಾಸ ಕಾಂಗ್ರೆಸ್‌ಗೆ.

ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಪ್ರತಿ ಪಕ್ಷದಿಂದಲೂ ಮೂರಕ್ಕಿಂತ ಹೆಚ್ಚಿದೆ. ಮೀಸಲು ಕ್ಷೇತ್ರ ಮಾಯಕೊಂಡ, ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕೂವರೆ ವರ್ಷಗಳಲ್ಲಿ ನಾಲ್ಕು ಬಾರಿ ಭೇಟಿ ನೀಡಿದ ಹರಿಹರ ಈ ಕ್ಷೇತ್ರಗಳಲ್ಲಿ ಪೈಪೋಟಿ ಇನ್ನಷ್ಟು ಪ್ರಬಲವಾಗಿದೆ.

ADVERTISEMENT

ಜಿಲ್ಲೆಯಲ್ಲಿ ಈ ನಾಲ್ಕೂವರೆ ವರ್ಷಗಳ ಕಾಲ ಅಪ್ಪ–ಮಗನೇ (ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ) ಅಧಿಕಾರ ನಡೆಸಿದರು. ಆರಂಭದ ಮೂರು ವರ್ಷ ಶಾಮನೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ, ಒಂದೂವರೆ ವರ್ಷದಿಂದ ಮಲ್ಲಿಕಾರ್ಜುನ ಅದೇ ಸ್ಥಾನದಲ್ಲಿದ್ದಾರೆ. ಆದರೆ, ದಾವಣಗೆರೆ ನಗರಕ್ಕೆ ಹರಿದುಬಂದಷ್ಟು ಅನುದಾನ ಉಳಿದ ತಾಲ್ಲೂಕುಗಳಿಗೆ ಏಕಿಲ್ಲ, ಉಸ್ತುವಾರಿ ಸಚಿವರು ನಗರಕ್ಕೋ, ಜಿಲ್ಲೆಗೋ ಎಂಬ ಪ್ರಶ್ನೆಗಳನ್ನು ಅವರದೇ ‍ಪಕ್ಷದ ಮುಖಂಡರು ಕೇಳುತ್ತಿದ್ದಾರೆ.

ಒಡೆದ ಮನೆ ಬಿಜೆಪಿ ಈಗಷ್ಟೇ ಒಂದಾಗಿದೆ. ಮುಖಂಡ ಎಸ್‌.ಎ.ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್‌.ಶಿವಯೋಗಿ ಸ್ವಾಮಿ ಮತ್ತವರ ಗುಂಪು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾಡಿದ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕವನ್ನು ವಿರೋಧಿಸಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನೊಂದಿಗೆ ಗುರುತಿಸಿಕೊಂಡಿತ್ತು. ಈ ಒಳ ಬಂಡಾಯ ಪಕ್ಷ ಸಂಘಟನೆ ಮೇಲೆ ಗಂಭೀರವಾಗಿ ಪರಿಣಾಮ ಬೀರಿತ್ತು. ಈಗ ತೇಪೆ ಹಚ್ಚಲಷ್ಟೇ ಸಾಧ್ಯವಾಗಿದೆ. ಒಳ ಬಂಡಾಯ ಚುನಾವಣೆ ವೇಳೆ ಸ್ಫೋಟಗೊಳ್ಳುವ ಸಾಧ್ಯತೆಗಳೇ ಹೆಚ್ಚಿವೆ ಎನ್ನುತ್ತಾರೆ ವಿರೋಧ ಪಕ್ಷಗಳ ಮುಖಂಡರು.

ಜೆಡಿಎಸ್‌ ಶಾಸಕರು ಜಿಲ್ಲೆಯಲ್ಲಿ ಒಬ್ಬರಿದ್ದಾರೆ. ಹರಿಹರ ಕ್ಷೇತ್ರದ ಎಚ್‌.ಎಸ್‌.ಶಿವಶಂಕರ್‌ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಗೆ ಭಾರೀ ಶ್ರಮ ವಹಿಸದಿದ್ದರೂ ಚನ್ನಗಿರಿ, ಮಾಯಕೊಂಡ ಕ್ಷೇತ್ರಗಳಲ್ಲಿ ಜೆಡಿಎಸ್‌ ಚುನಾವಣೆಯಲ್ಲಿ ನಿರ್ಣಾಯಕ ಎನ್ನುವುದು ಈ ಪಕ್ಷದ ಮುಖಂಡರ ಅಚಲ ವಿಶ್ವಾಸ.

ಜೆಡಿಎಸ್‌ ಈಗಾಗಲೇ ಎಸ್‌ಟಿ ಘಟಕದ ರಾಜ್ಯ ಸಮಾವೇಶವನ್ನು ದಾವಣಗೆರೆಯಲ್ಲಿ ನಡೆಸಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಪ್ರದೇಶಕ್ಕೆ ದೇವೇಗೌಡರು ಈಚೆಗೆ ಭೇಟಿ ನೀಡಿ, ಏಕಕಾಲಕ್ಕೆ ರೈತರು ಹಾಗೂ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ ಹೋಗಿದ್ದಾರೆ.

ಲಿಂಗಾಯತ, ವೀರಶೈವ ಸಮುದಾಯದವರೇ ಹೆಚ್ಚಿರುವ ಈ ಜಿಲ್ಲೆಯಲ್ಲಿ ಸ್ವತಂತ್ರ ಧರ್ಮದ ಚರ್ಚೆಯು ರಾಜಕೀಯ ನಾಯಕರು, ಮಠಾಧೀಶರ ಮಧ್ಯೆ ನಡೆಯುತ್ತಿದೆಯೇ ಹೊರತು ಜನರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣೆ ಮೇಲೂ ಇದು ಯಾವುದೇ ಪರಿಣಾಮ–ಪ್ರಭಾವ ಬೀರುವುದಿಲ್ಲ ಎನ್ನುವುದು ಸ್ಥಳೀಯ ಲಿಂಗಾಯತ ಮುಖಂಡರ ವಿಶ್ಲೇಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.