ADVERTISEMENT

ಬಿಜೆಪಿಯಲ್ಲಿ ಭಿನ್ನಮತ ಇಲ್ಲ: ಎಂಪಿಆರ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 4:40 IST
Last Updated 16 ಜುಲೈ 2012, 4:40 IST

ಹೊನ್ನಾಳಿ: ಬಿಜೆಪಿಯಲ್ಲಿ ಭಿನ್ನಮತ ಇಲ್ಲ. ಸಚಿವ ಸ್ಥಾನ ದೊರೆಯದ ಕಾರಣ ಕೆಲ ಶಾಸಕರಿಗೆ ಅಸಮಾಧಾನ ಇರುವುದು ನಿಜ. ಸಮಾಲೋಚನೆ ಮೂಲಕ ಅದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಭಾನುವಾರ ತಾಲ್ಲೂಕಿನ ಗಡಿಗ್ರಾಮ ಮುಕ್ತೇನಹಳ್ಳಿಗೆ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೇಳೂರು ಗೋಪಾಲಕೃಷ್ಣ, ಜಿ. ಕರುಣಾಕರ ರೆಡ್ಡಿ, ಬಿ.ಪಿ. ಹರೀಶ್ ಸೇರಿದಂತೆ ಅನೇಕರಿಗೆ ಸಚಿವ ಸ್ಥಾನ ದೊರೆಯಬೇಕಿತ್ತು. ಕಾರಣಾಂತರಗಳಿಂದ ದೊರೆತಿಲ್ಲ. ಪಕ್ಷದಲ್ಲಿ ಬೇರೆ ಜವಾಬ್ದಾರಿ ನೀಡುವ ಮೂಲಕ ಮತ್ತು ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಅಸಮಾಧಾನ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಬೇಳೂರು ಗೋಪಾಲಕೃಷ್ಣ ಈಚೆಗೆ ಸುದ್ದಿಗಾರರ ಜತೆ ಮಾತನಾಡುತ್ತಾ, ಈಶ್ವರಪ್ಪ ಮತ್ತು ಹಾಲಪ್ಪ ಅವರನ್ನು ಮೀರ್ ಸಾದಿಕ್ ಹಾಗೂ ಕಾಮುಕ ಎಂದು ಜರೆದಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಈಶ್ವರಪ್ಪ ಹಿರಿಯರು. ಅವರ ಬಗ್ಗೆ ಯಾರಿಗೂ ಕೆಟ್ಟ ಭಾವನೆ ಇಲ್ಲ ಎಂದರು.

ಕೆಲ ಶಾಸಕರು ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದಾರೆ, ಇದು ಬೆದರಿಕೆ ತಂತ್ರವೇ ಎಂಬ ಪ್ರಶ್ನೆಗೆ ಯಾರೂ ರಾಜೀನಾಮೆ ನೀಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ಅಬಕಾರಿ ಸಚಿವರಾಗಿದ್ದವರು ವಿಧಾನಸೌಧದ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರು. ಆದರೆ, ತಾವು ಖಾತೆ ವಹಿಸಿಕೊಂಡ ನಂತರ ರಾಜ್ಯದ ನಾನಾ ಭಾಗಗಳಲ್ಲಿ ಮಿಂಚಿನ ಸಂಚಾರ ನಡೆಸಿ ಕಳ್ಳಬಟ್ಟಿ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇನೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರಲು ಶ್ರಮಿಸಿದ್ದೇನೆ. ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಉತ್ತಮವಾಗಿ ಕೆಲಸ ನಿರ್ವಹಿಸಿದ್ದೇನೆ. ಸಚಿವನಾಗಿ ನನ್ನ ಕೆಲಸ ನನಗೆ ತೃಪ್ತಿ ನೀಡಿದೆ ಎಂದು ವಿವರಿಸಿದರು.

ಇಷ್ಟೆಲ್ಲಾ ಜವಾಬ್ದಾರಿಗಳ ನಡುವೆಯೂ ಹೊನ್ನಾಳಿ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಿದ್ದೇನೆ. ಎಲ್ಲಕ್ಕಿಂತ ನನಗೆ ತಾಲ್ಲೂಕಿನ ಅಭಿವೃದ್ಧಿಯೇ ಮೊದಲ ಆದ್ಯತೆಯಾಗಿದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಾಂತರಾಜ್ ಪಾಟೀಲ್, ಮಂಜುನಾಥ್ ನೆಲಹೊನ್ನೆ  ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.