ADVERTISEMENT

ಬಿಜೆಪಿಯಲ್ಲಿ ಭಿನ್ನಮತ ಇಲ್ಲ: ಎಂಪಿಆರ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2011, 5:45 IST
Last Updated 29 ಏಪ್ರಿಲ್ 2011, 5:45 IST

ಹೊನ್ನಾಳಿ: ಇನ್ನೂ 2 ವರ್ಷಗಳ ಕಾಲ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲ್ಲೂಕಿನ ಸಾಸ್ವೆಹಳ್ಳಿಯಲ್ಲಿ ಈಚೆಗೆ ಎಪಿಎಂಸಿ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ಭಿನ್ನಮತ ಇಲ್ಲ ಎಂದರು.

ಯಾವುದೇ ಜಾತಿ, ವರ್ಗ ಭೇದವಿಲ್ಲದೇ ಎಲ್ಲಾ ಮಠ-ಮಂದಿರಗಳಿಗೆ ಯಡಿಯೂರಪ್ಪ ಅನುದಾನ ನೀಡುತ್ತಾ ಬಂದಿದ್ದಾರೆ, ಆದರೆ, ವಿರೋಧ ಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

ಬಿಜೆಪಿ ಸರ್ಕಾರದ ಸಾಧನೆಗಳನ್ನು ಗಮನಿಸಿ, ಎಪಿಎಂಸಿ ಚುನಾವಣೆಗೆ ಸಾಸ್ವೆಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿರುವ ಹನುಮನಹಳ್ಳಿ ರವಿಕುಮಾರ್ ಅವರಿಗೆ ಮತ ನೀಡಿ ಜಯಶೀಲರನ್ನಾಗಿಸಬೇಕು ಎಂದು  ಅವರು ಮತದಾರರಲ್ಲಿ ವಿನಂತಿಸಿದರು.

ಹಣ ಬಿಡುಗಡೆ: ಸಾಸ್ವೆಹಳ್ಳಿ ಹೋಬಳಿ ಅಭಿವೃದ್ಧಿಗೆ ಸರ್ಕಾರ ` 15 ಕೋಟಿ ಬಿಡುಗಡೆ ಮಾಡಿದೆ, ಮೂಲ ಸೌಲಭ್ಯಗಳಾದ ರಸ್ತೆ, ಚರಂಡಿ ಇತರ ಕಾರ್ಯಗಳಿಗಾಗಿ ಈ ಹಣ ಬಳಸಲಾಗುವುದು ಎಂದು ಹೇಳಿದರು.

ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಗದ್ದಿಗೇಶ್ ಮಾತನಾಡಿ, ರಾಂಪುರದಲ್ಲಿ ಸರ್ಕಾರಿ ಪ್ರೌಢಶಾಲೆ, ಕ್ಯಾಸಿನಕೆರೆಯಲ್ಲಿ ಆಯುರ್ವೇದಿಕ್ ಆಸ್ಪತ್ರೆ, ರಸ್ತೆ ನಿರ್ಮಾಣ ಮುಂತಾದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾಬಾಯಿ ಮಾತನಾಡಿ, ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಗೆ ಕಾರಣವಾಗಿರುವ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಇದೇ ತಿಂಗಳಲ್ಲಿ ಹೊನ್ನಾಳಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಸಾಸ್ವೆಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.