ADVERTISEMENT

ಬಿತ್ತನೆಬೀಜ ಹೊಂದಾಣಿಕೆ ಕಸರತ್ತು ಆರಂಭ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 5:05 IST
Last Updated 21 ಏಪ್ರಿಲ್ 2012, 5:05 IST

ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಒಂದೇ ವಾರದಲ್ಲಿ ಎರಡು ಬಾರಿ ಉತ್ತಮ ಹದ ಮಳೆ ಬೀಳುವ ಮೂಲಕ ಜನರು ಹರ್ಷ ವ್ಯಕ್ತಪಡಿಸಿದರೆ, ರೈತ ವರ್ಗದಲ್ಲಿ ಬಿತ್ತನೆಬೀಜ ಹೊಂದಾಣಿಕೆ ಆತಂಕ ವ್ಯಾಪಕವಾಗಿ ಮನೆ ಮಾಡಿದೆ.

ತಾಲ್ಲೂಕಿನಲ್ಲಿ ಕಳೆದ ವರ್ಷ ಒಂದೂ ಹದ ಮಳೆ ಬೀಳದಿದ್ದರೂ ಸಹ ತುಂತುರು ಮಳೆಗೆ ಶೇಂಗಾ ಬಿತ್ತನೆ ಮಾಡಿ ಕೈಸುಟ್ಟುಕೊಂಡ ರೈತರು ಈ ವರ್ಷ ಮುಂಗಾರು ಆರಂಭದ್ಲ್ಲಲಿಯೇ ಎರಡು ಸಾರಿ ಬಿದ್ದಿರುವ ಉತ್ತಮ ಮಳೆಗೆ ಸಂತಸ ಪಡುವ ಅದೃಷ್ಟ ಕಳೆದುಕೊಂಡಿದ್ದಾರೆ ಎಂದು ಹಲವು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಕೃಷಿ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಪ್ರತಿವರ್ಷ ಅಂದಾಜು 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತಿದೆ, ಈ ವರ್ಷವೂ ಇದೇ ಅಂದಾಜು ಹೊಂದಲಾಗಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಇಳುವರಿ ಪೂರ್ಣವಾಗಿ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಈ ವರ್ಷ ಬಿತ್ತನೆಬೀಜಕ್ಕೆ ಭಾರೀ ಬೇಡಿಕೆ ಬರುವ ಅಂದಾಜಿದೆ. ಕೃಷಿ ಇಲಾಖೆ ಈ ವರ್ಷ 33 ಸಾವಿರ ಟನ್ ಬಿತ್ತನೆಬೀಜ ಅಗತ್ಯವಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ನಿಯಮ ಪ್ರಕಾರ ಬೇಡಿಕೆ ಪ್ರಮಾಣದಲ್ಲಿ ಶೇ. 12.5ರಷ್ಟು ಮಾತ್ರ ನೀಡಲು ಅವಕಾಶವಿದೆ. ಈ ಪ್ರಕಾರ ಅಂದಾಜು 4.25 ಟನ್ ಶೇಂಗಾ ಬಿತ್ತನೆಬೀಜ ನೀಡಲು ಮಾತ್ರ ಸಾಧ್ಯವಾಗಬಹುದು. 2009-10ನೇ ಸಾಲಿನಲ್ಲಿ ಏಳು ಟನ್ ಹಾಗೂ 2010-11ನೇ ಸಾಲಿನಲ್ಲಿ 6.5 ಟನ್ ಬಿತ್ತನೆಬೀಜ ವಿತರಣೆ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರತಿ ಎಕರೆಗೆ 1.5 ಕ್ವಿಂಟಲ್ ಬಿತ್ತನೆಬೀಜ ಅಗತ್ಯವಿದೆ. ಖಾಸಗಿಯಾಗಿ ಕೊಳ್ಳಲು ಪ್ರಸ್ತುತ ಪ್ರತಿ ಕ್ವಿಂಟಲ್ ಬಿತ್ತನೆಶೇಂಗಾ ಕಾಯಿ ದರ ್ಙ 4,500-4,800 ಇದೆ. ಬಿತ್ತನೆಬೀಜ ದರ ್ಙ 7 ಸಾವಿರ ಆಸುಪಾಸಿನಲ್ಲಿದೆ ಎಂದು ಬೀಜದ ವ್ಯಾಪಾರಿ ಮೊಗಲಹಳ್ಳಿಯ ಎಂ.ಇ. ಮಂಜುನಾಥ್ ಹೇಳುತ್ತಾರೆ.

ತಾಲ್ಲೂಕಿನ ಶೇ. 75 ರಷ್ಟು ರೈತರ ಬಳಿ ಈ ವರ್ಷ ಬಿತ್ತನೆಬೀಜ ಇಲ್ಲದ ಪರಿಣಾಮ ಬೇಡಿಕೆ ಪ್ರಮಾಣ ಊಹಿಸಲು ಸಹ ಅಸಾಧ್ಯ ಎಂಬ ಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಶಾಸಕರು, ಜಿ.ಪಂ. ಸದಸ್ಯರು ಸೇರಿದಂತೆ ತಾಲ್ಲೂಕಿನ ಜನಪ್ರತಿನಿಧಿಗಳ ಸಭೆ ಕರೆದು ಸಂಭವನೀಯ ಬಿತ್ತನೆಬೀಜ ಸಮಸ್ಯೆ ನಿವಾರಣೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಟೇಲ್ ಜಿ. ಪಾಪನಾಯಕ ಹಾಗೂ ರೈತಸಂಘದ ಪದಾಧಿಕಾರಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.