ADVERTISEMENT

ಬಿಸಿಲಿನ ಝಳ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 5:40 IST
Last Updated 20 ಮಾರ್ಚ್ 2012, 5:40 IST

ದಾವಣಗೆರೆ: ನಗರದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಬಿಸಿಲಿನ ಬೇಗೆ ತಾಳಲಾರದೆ ತೊಂದರೆ ಅನುಭವಿಸುತ್ತಿದ್ದಾರೆ.

 ಸೋಮವಾರ ಕನಿಷ್ಠ 33 ಡಿಗ್ರಿ ಸೆಲ್ಸಿಯಸ್ ಇತ್ತು. ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಈ ಬಾರಿಯ ಬೇಸಿಗೆಯ  ದಿನಗಳಲ್ಲಿ  ಅತಿ ಹೆಚ್ಚಿನ ಉಷ್ಣಾಂಶ ಎನ್ನಲಾಗಿದೆ! ಇದರಿಂದಾಗಿ ಬಿಸಿಲಿನ ಝಳ ಹೆಚ್ಚಾಗಿ, ಸೆಕೆಯಿಂದ ಕಿರಿಕಿರಿಯ ಅನುಭವ ಉಂಟಾಗುತ್ತಿದೆ.

ಬೇಸಿಗೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಯುವತಿಯರು ಸೇರಿದಂತೆ ಬಹುತೇಕರು ಬಿಸಿಲಿನಿಂದ ಚರ್ಮದ ಕಾಂತಿ ರಕ್ಷಿಸಿಕೊಳ್ಳಲು ಮುಖಕ್ಕೆ ಬಟ್ಟೆಗಳನ್ನು ಕಟ್ಟಿಕೊಳ್ಳುತ್ತಿರುವುದು ಹಾಗೂ ವಿವಿಧ ಫೇಸ್ ಕ್ರೀಮ್‌ಗಳ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ.

ಬಿಸಿಲಿನ ಬೇಗೆ ತಾಳಲಾರದೆ, ಕಲ್ಲಂಗಡಿ, ಎಳನೀರು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಹಣ್ಣಿನ ರಸ, ತಂಪುಪಾನೀಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸಂಜೆ ಆಗುತ್ತಿದ್ದಂತೆಯೇ, ಉದ್ಯಾನಗಳು ಮತ್ತಿತರ ಕಡೆಗಳಲ್ಲಿ ಕೆಲ ಕಾಲ ಕಳೆಯುವುದಕ್ಕೆ ಇಷ್ಟಪಡುತ್ತಿದ್ದಾರೆ.

ಮನೆಗಳಲ್ಲಿ, ಕಚೇರಿಗಳಲ್ಲಿ ಫ್ಯಾನ್ ಚಾಲೂ ಇಲ್ಲದೆ ಕುಳಿತುಕೊಳ್ಳುವುದಕ್ಕೆ ಆಗುತ್ತಿಲ್ಲ. ವಿದ್ಯುತ್ ಕೈಕೊಟ್ಟಿತೆಂದರೆ, ಜನರು ಬೆಸ್ಕಾಂಗೆ ಹಿಡಿಶಾಪ ಹಾಕುವುದು ಕಂಡುಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.