ADVERTISEMENT

ಬೆಂಗಳೂರಲ್ಲೇ ಚುನಾಯಿತ ಪ್ರತಿನಿಧಿಗಳ ಠಿಕಾಣಿ

ಸರ್ಕಾರ ರಚನೆ ಬಿಕ್ಕಟ್ಟು: ಕಾರ್ಯಕರ್ತರು, ಬೆಂಬಲಿಗರಲ್ಲಿ ಆತಂಕ

ನಾಗರಾಜ ಎನ್‌
Published 17 ಮೇ 2018, 4:51 IST
Last Updated 17 ಮೇ 2018, 4:51 IST

ದಾವಣಗೆರೆ: ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಜಿಲ್ಲೆಯ ಎಂಟೂ ಕ್ಷೇತ್ರಗಳ ಚುನಾಯಿತ ಅಭ್ಯರ್ಥಿಗಳು ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದಾರೆ.

ಚುನಾವಣೆ ಎದುರಿಸಲು ಕೆಲ ತಿಂಗಳುಗಳಿಂದ ಕಾರ್ಯತಂತ್ರ ಹೆಣೆಯುತ್ತಿದ್ದ ಅಭ್ಯರ್ಥಿಗಳು, ಇದೀಗ ಹೈಕಮಾಂಡ್‌ ಕಣ್ಗಾವಲಿನಲ್ಲಿ ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಳಲು ಪಟ್ಟುಗಳನ್ನು ಹಾಕುತ್ತಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಗೆಲುವಿನ ಪ್ರಮಾಣಪತ್ರ ಪಡೆದ ಅಭ್ಯರ್ಥಿಗಳು ನೇರವಾಗಿ ತಮ್ಮ ಕ್ಷೇತ್ರಗಳಿಗೆ ಹೋಗಿದ್ದರು. ಕಾರ್ಯಕರ್ತರು, ಬೆಂಬಲಿಗರ ಜೊತೆಗೂಡಿ ಸಂಭ್ರಮಾಚರಣೆ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಸರ್ಕಾರ ರಚನೆಯ ಬಿಕ್ಕಟ್ಟು ಎದುರಾಗುತ್ತಿದ್ದಂತೆ ಪಕ್ಷದ ವರಿಷ್ಠರ ಕರೆ ಮೇರೆಗೆ ಎಲ್ಲರೂ ಕ್ಷೇತ್ರದಿಂದ ತೆರಳಿದ್ದಾರೆ. ವಿಜಯಿಗಳ ವಿಜಯೋತ್ಸವ ಅರ್ಧಕ್ಕೆ ನಿಂತಿದೆ.

ADVERTISEMENT

‘ಜಿಲ್ಲೆಯಲ್ಲಿ ಎರಡೇ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದರೂ ಸರ್ಕಾರ ರಚಿಸುವುದು ನಾವೇ’ ಎಂದು ಹೇಳಿಕೆ ನೀಡಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಮಂಗಳವಾರ ರಾತ್ರಿಯೇ ಬೆಂಗಳೂರು ತಲುಪಿದ್ದಾರೆ. ಹರಿಹರದ ಚುನಾಯಿತ ಅಭ್ಯರ್ಥಿ ಎಸ್‌. ರಾಮಪ್ಪ ಹೈಕಮಾಂಡ್‌ ನಿರ್ದೇಶನದಂತೆ ಬುಧವಾರ ಬೆಳಿಗ್ಗೆ ರಾಜಧಾನಿಯಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದಾರೆ. ನಂತರ ರಾಜ್ಯಪಾಲರ ಅಧಿಕೃತ ಕಚೇರಿಗೆ ಮುಖಂಡರ ಜತೆಗೆ ಭೇಟಿ ನೀಡಿದ್ದಾರೆ.

‘ಸಂಸದ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಜಿಲ್ಲೆಯ ಆರೂ ಮಂದಿ ಬಿಜೆಪಿ ಶಾಸಕರು ಬುಧವಾರ ಬೆಳಿಗ್ಗೆ ಬೆಂಗಳೂರು ಮುಟ್ಟಿದ್ದಾರೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಕೇಂದ್ರ ಸಚಿವರಾದ ಅನಂತ್‌ಕುಮಾರ್, ಡಿ.ವಿ. ಸದಾನಂದ ಗೌಡ ನೇತೃತ್ವದಲ್ಲಿ ಚರ್ಚೆ ನಡೆಸಿ, ಸರ್ಕಾರ ರಚನೆಗೆ ಯಾವ ತಂತ್ರ ಅನುಸರಿಸಬಹುದು ಎಂಬ ಬಗ್ಗೆ ಮಾತುಕತೆ ನಡೆಸಿದ್ದಾರೆ’ ಎಂದು ಬಿಜೆಪಿ ಮಾಧ್ಯಮ ಪ್ರಮುಖ ಧನುಷ್‌ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿರಿಯ ಮುಖಂಡರ ಸಂಪರ್ಕದಲ್ಲಿಯೇ ಇರುವಂತೆ ಎರಡೂ ಪಕ್ಷಗಳ ಚುನಾಯಿತ ಪ್ರತಿನಿಧಿಗಳಿಗೆ ಹೈಕಮಾಂಡ್‌ ಸೂಚನೆ ನೀಡಿದೆ. ಹೀಗಾಗಿ, ಇವರ‍್ಯಾರೂ ಜಿಲ್ಲೆಯ ಕಾರ್ಯಕರ್ತರು, ಮುಖಂಡರ ಸಂಪರ್ಕಕ್ಕೂ ಸಿಗುತ್ತಿಲ್ಲ.

‘ನಮ್ಮ ನೆಚ್ಚಿನ ನಾಯಕ ಗೆಲುವು ಸಾಧಿಸಿದ್ದು, ಸಂಭ್ರಮಾಚರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆವು. ಕ್ಷೇತ್ರದ ಎಲ್ಲೆಡೆ ಸಂಚರಿಸಿ, ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿ, ಧನ್ಯವಾದ ಹೇಳಲು ನಿಶ್ಚಯಿಸಿದ್ದೆವು. ಆದರೆ, ಅವರು ಬೆಂಗಳೂರಿಗೆ ಹೋಗಿದ್ದಾರೆ. ಪಕ್ಷ ಸರ್ಕಾರ ರಚಿಸುವುದೇ? ನಮ್ಮ ಶಾಸಕರಿಗೆ ಸಚಿವ ಸ್ಥಾನ ಸಿಗುವುದೇ ಎಂಬ ಬಗ್ಗೆ ಚಿಂತೆ ಮಾಡುವಂತಾಗಿದೆ’ ಎಂದು ಹೊನ್ನಾಳಿಯ ಬಿಜೆಪಿ ಕಾರ್ಯಕರ್ತ ಮಂಜುನಾಥ್‌ ತಿಳಿಸಿದರು.

‘ಜೆಡಿಎಸ್‌ಗೆ ಬೆಂಬಲ ನೀಡಿ, ಸರ್ಕಾರ ರಚಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗುವುದೇ? ಅಧಿಕಾರ ಹಿಡಿದು, ಈ ಚುನಾವಣೆಯಲ್ಲಿ ಪಕ್ಷಕ್ಕೆ ಜಿಲ್ಲೆಯಲ್ಲಿ ಆಗಿರುವ ನಷ್ಟವನ್ನು ತುಂಬಿಕೊಳ್ಳಲು ಸಾಧ್ಯವಾಗುವುದೇ ಎಂಬ ನಿರೀಕ್ಷೆಯಿದೆ. ಹೀಗೇನಾದರೂ ಆದರೆ, ಶಾಸಕ ಶಾಮನೂರು ಶಿವಶಂಕರಪ್ಪ ಮತ್ತೆ ಮಂತ್ರಿಯಾಗುತ್ತಾರೆ. ಆಗ ದೊಡ್ಡ ಸಂಭ್ರಮಾಚರಣೆ ಮಾಡುತ್ತೇವೆ’ ಎನ್ನುತ್ತಾರೆ ಕಾಂಗ್ರೆಸ್‌ ಕಾರ್ಯಕರ್ತ ಪ್ರಮೋದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.