ADVERTISEMENT

ಬೆಳೆ ವಿಮಾ ಯೋಜನೆ: ರೈತರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 6:45 IST
Last Updated 18 ಜೂನ್ 2011, 6:45 IST

ದಾವಣಗೆರೆ: ಮುಂಗಾರು ಹಂಗಾಮಿನಲ್ಲಿ ವಿವಿಧ ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಗಳಿಗೆ ರಾಷ್ಟ್ರೀಯ ಬೆಳೆ ವಿಮೆ ಯೋಜನೆ ಮತ್ತು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗಳ ಅನುಷ್ಠಾನ ಕುರಿತು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.  

 ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಳೆ ನಷ್ಟ, ಪ್ರಕೃತಿ ವಿಕೋಪ, ಪೀಡೆ ಹಾಗೂ ರೋಗ ಬಾಧೆಯಿಂದ ವಿಫಲಗೊಂಡ ಸಂದರ್ಭಗಳಲ್ಲಿ ಸೂಕ್ತ ಪರಿಹಾರವನ್ನು ಪಡೆಯಲು ಚಂದಾದಾರ ರೈತರಿಗೆ ಅವಕಾಶವಿದೆ. ವಿಮಾ ಮೊತ್ತದ ಶೇ. 2.5ರಷ್ಟು ವಿಮಾಕಂತನ್ನು ಅಧಿಸೂಚಿತ ಮುಂಗಾರು ಬೆಳೆಗಳಿಗೆ ರೈತರು ಪಾವತಿಸಬೇಕು.


ಬೆಳೆ ವಿವರ: ಮಳೆ ಆಶ್ರಿತ ನವಣೆ ಬೆಳೆಗೆ ಕನಿಷ್ಠ  ವಿಮಾಮೊತ್ತ ್ಙ 2,200, ನೀರಾವರಿ ಭತ್ತಕ್ಕೆ ಗರಿಷ್ಠ ್ಙ 29,100 ಇದೆ.  ಬೆಳೆನಷ್ಟ ಪರಿಹಾರದ ಮೊತ್ತವನ್ನು ಬೆಳೆವಾರು ಪ್ರಾರಂಭಿಕ ಇಳುವರಿ, ಇಳುವರಿಯಲ್ಲಿನ ಕೊರತೆ ಮತ್ತು ವಿಮಾ ಮೊತ್ತಗಳನ್ನು ಆಧರಿಸಿ ನೀಡಲಾಗುವುದು. ಈ ಕಾರ್ಯಕ್ರಮವನ್ನು ಭಾರತೀಯ ಕೃಷಿ ವಿಮಾ ನಿಗಮದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. 

ಕೃಷಿ ಸಾಲವನ್ನು ಬ್ಯಾಂಕುಗಳ ಮೂಲಕ ಪಡೆಯುವ ರೈತರಿಗೆ ಈ ಯೋಜನೆಗಳು ಕಡ್ಡಾಯ. ಸಾಲಗಾರರಲ್ಲದವರಿಗೆ ಐಚ್ಛಿಕವಾಗಿರುತ್ತವೆ. ಆದ್ದರಿಂದ ಬೆಳೆ ಬಿತ್ತನೆ ಮಾಡಿದ ಒಂದು ತಿಂಗಳ ಒಳಗೆ ಅಥವಾ ನಿಗದಿಪಡಿಸಿದ ದಿನಾಂಕಗಳಂದು ಬೆಳೆ ವಿಮಾ ಯೋಜನೆಗಳಲ್ಲಿ ಭಾಗವಹಿಸಿ ವಿಮಾ ಸೌಲಭ್ಯ  ಪಡೆಯಲು ಕೋರಲಾಗಿದೆ.

ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ (ಬಸವಾಪಟ್ಟಣ -1, ಬಸವಾಪಟ್ಟಣ-2, ಸಂತೇಬೆನ್ನೂರು-1 ಹೊರತುಪಡಿಸಿ) ಮಳೆ ಆಶ್ರಿತ ರಾಗಿ, ಜೋಳ, ಮುಸುಕಿನಜೋಳ, ತೊಗರಿ, ಹೆಸರು, ಸೂರ್ಯಕಾಂತಿ, ನೆಲಗಡಲೆ (ಶೇಂಗಾ) ಹತ್ತಿ, ಈರುಳ್ಳಿ ಮತ್ತು ನೀರಾವರಿ ಹತ್ತಿ, ಈರುಳ್ಳಿ ಬೆಳೆಗಳಿಗೆ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆ ಜಾರಿ ಇರುವ ಬೆಳೆಗಳಿಗೆ, ಅಧಿಸೂಚಿತ ಹೋಬಳಿಗಳಲ್ಲಿ ಬೆಳೆ ಸಾಲ ಪಡೆಯುವ ರೈತರು ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಭಾಗವಹಿಸುವಂತಿಲ್ಲ. 
ಆದರೆ, ಬೆಳೆ ಸಾಲ ಪಡೆಯದ ರೈತರು ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅಥವಾ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಇವುಗಳಲ್ಲಿ ಯಾವುದಾದರೊಂದು ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಅಡಿ ನೋಂದಣಿಗೆ ಕೊನೆಯ ದಿನಾಂಕ ಜೂನ್ 30.

ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅಡಿ ವಿಮಾ ಹಣ  ಪಾವತಿಸಲು ಆಗಸ್ಟ್ 31 ಕೊನೆಯ ದಿನಾಂಕ. ಈ ಯೋಜನೆ ಅಡಿ ಮಳೆ ಆಶ್ರಿತ ತೊಗರಿ ಪ್ರತಿ ಹೆಕ್ಟೇರಿಗೆ ಗರಿಷ್ಠ ವಿಮಾ ಮೊತ್ತ ರೂ.12,000 ಇದ್ದು, ರೈತರು ಶೇ. 2.5ರಷ್ಟು ಹಾಗೂ ಎಣ್ಣೆಕಾಳು ಬೆಳೆಗಳಿಗೆ 3.5ರಷ್ಟು ವಿಮಾ ಕಂತು ಮೊತ್ತ ಪಾವತಿಸಬೇಕು.   ಈ ಎರಡೂ ಕಾರ್ಯಕ್ರಮಗಳ ಕುರಿತು ಹೆಚ್ಚಿನ ವಿವರಗಳಿಗೆ ಸ್ಥಳೀಯ  ಬ್ಯಾಂಕ್, ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT