ದಾವಣಗೆರೆ: ಮುಂಗಾರು ಮಳೆ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಸಂಬಂಧಿಸಿದಂತೆ ಎದುರಾಗುವ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) `ಮುಂಗಾರು ಸ್ಪಂದನೆ' ಯೋಜನೆ ರೂಪಿಸಿದೆ.
ಮುಂಗಾರು ಪೂರ್ವ (ಜೂನ್ 1ರಿಂದ)ದಿಂದ ಮುಗಿಯುವವರೆಗೆ (ಸೆಪ್ಟೆಂಬರ್ 30ರವರೆಗೆ) ಈ ಕಾರ್ಯಾಚರಣೆ ಜಾರಿಯಲ್ಲಿರುತ್ತದೆ. ಇದಕ್ಕಾಗಿ ಮಾನವ ಸಂಪನ್ಮೂಲ, ಸಾಮಗ್ರಿಗಳು ಹಾಗೂ ವಾಹನಗಳ ವ್ಯವಸ್ಥೆಯನ್ನು ಬೆಸ್ಕಾಂ ಮಾಡಿಕೊಂಡಿದೆ.
ಮುಂಗಾರು ಮಳೆ ಎಂದರೆ, ಸಂತಸದ ಜತೆಗೆ ಸಮಸ್ಯೆಗಳನ್ನು ಹೊತ್ತುಕೊಂಡು ಬರುತ್ತದೆ. ಪ್ರಮುಖವಾಗಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲು ಮಳೆ ಕಾರಣವಾಗುತ್ತದೆ. ಗಾಳಿ, ಮಳೆಯಿಂದ ಕಂಬ, ತಂತಿಗಳಿಗೆ ಹಾನಿಯಾಗುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ, ಕತ್ತಲಿನಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ಎದುರಾಗುತ್ತದೆ. ಈ ವಿಕೋಪ ತುರ್ತಾಗಿ ನಿರ್ವಹಿಸಿ, ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಬೆಸ್ಕಾಂ ಪೂರ್ವಸಿದ್ಧತೆ ಕೈಗೊಂಡಿದೆ.
ಗ್ರಾಹಕರ ಸುರಕ್ಷತೆ ಹಿನ್ನೆಲೆಯಲ್ಲಿ, ಕರೆಗಳನ್ನು ಸ್ವೀಕರಿಸಲು ಸಹಾಯವಾಣಿ (080- 22873333) ಸ್ಥಾಪಿಸಲಾಗಿದೆ. ಇಲ್ಲಿ ದಾಖಲಾಗುವ ದೂರು, ಸಮಸ್ಯೆಯ ಮಾಹಿತಿಯನ್ನು ವ್ಯಾಪ್ತಿಯ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ. ಗೃಹಬಳಕೆ, ಸಣ್ಣ ಕೈಗಾರಿಕೆ, ಬೀದಿದೀಪ, ವಾಣಿಜ್ಯ ಬಳಕೆ, ಎಚ್‌ಟಿ ಗ್ರಾಹಕರು (67 ಅಶ್ವಶಕ್ತಿ ಮೇಲ್ಪಟ್ಟು), ಕೈಗಾರಿಕೆಗೆ ಸಂಬಂಧಿಸಿದ ದೂರನ್ನು ದಾಖಲಿಸಬಹುದು.
ಪ್ರತಿ ವಿಭಾಗದಲ್ಲಿಯೂ ಅಗತ್ಯ ಲೈನ್‌ಮ್ಯಾನ್, ಕ್ಷೇತ್ರ ಸಿಬ್ಬಂದಿ, ಅಗತ್ಯ ಸಾಮಗ್ರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್‌ಗಳು ದುರಸ್ತಿ ಕಾಮಗಾರಿಗಳ ಮೇಲ್ವಿಚಾರಣೆ ವಹಿಸುತ್ತಾರೆ. ಕಾರ್ಯಪಾಲಕ ಎಂಜಿನಿಯರ್ (ಎಲೆಕ್ಟ್ರಿಕಲ್) ವ್ಯವಸ್ಥೆ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸಬೇಕು. ಸುಸಜ್ಜಿತ ವಾಹನ ಸಿದ್ಧವಾಗಿರಬೇಕು (ಒಬ್ಬ ಕಿರಿಯ ಎಂಜಿನಿಯರ್, ನಾಲ್ವರು ಲೈನ್‌ಮನ್‌ಗಳು ಇರುತ್ತಾರೆ). ಇದರಲ್ಲಿ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ವಾಹನ ಕೆಟ್ಟರೆ ದುರಸ್ತಿಗೆ ಕೆಲ ಸಾಮಗ್ರಿಗಳನ್ನು ಇಟ್ಟಿರಬೇಕು ಎಂದು ಎಲ್ಲ ವಿಭಾಗಗಳಿಗೆ ಸೂಚಿಸಲಾಗಿದೆ. 24 ಗಂಟೆಗಳ ಕಾಲವೂ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಲು, ಹೆಚ್ಚುವರಿಯಾಗಿ 150 ವಾಹನ ನೀಡಲಾಗಿದೆ.
ಬೆಸ್ಕಾಂ, ದಾವಣಗೆರೆ, ಚಿತ್ರದುರ್ಗ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯ 41,092 ಚ.ಕಿ.ಮೀ. ವ್ಯಾಪ್ತಿಸ ಹೊಂದಿದೆ.
ವಿದ್ಯುತ್ ಅವಘಡ ಸಮರ್ಪಕ ನಿರ್ವಹಣೆಗೆ ಸಿದ್ಧತೆ...
ಜಿಲ್ಲೆಯಲ್ಲಿ ದಾವಣಗೆರೆ ಹಾಗೂ ಹರಿಹರ ವಿಭಾಗಗಳಿವೆ. ದಾವಣಗೆರೆ ವಿಭಾಗಕ್ಕೆ ದಾವಣಗೆರೆ, ಚನ್ನಗಿರಿ ಹಾಗೂ ಜಗಳೂರು ಬರುತ್ತದೆ. ಒಟ್ಟು 33 ಶಾಖಾಧಿಕಾರಿಗಳು ಇದ್ದಾರೆ. ವಿದ್ಯುತ್ ಮಾರ್ಗಕ್ಕೆ ತೊಂದರೆಯಾಗುವ ಮರಗಳ ರೆಂಬೆ, ಕೊಂಬೆ ಕತ್ತರಿಸಲಾಗಿದೆ. ಶಾಖಾಧಿಕಾರಿಗಳು 24 ಗಂಟೆಯೂ ಸ್ಪಂದಿಸಲು ಸೂಚಿಸಲಾಗಿದೆ. ಪ್ರತಿ ಶಾಖೆಗೂ ತಲಾ ಒಂದೊಂದು ಮಾರುತಿ ಓಮ್ನಿ ನೀಡಲಾಗಿದೆ. ಸಿಬ್ಬಂದಿಗೆ ವೈರ್‌ಲೆಸ್‌ಗಳು ಹಾಗೂ ಮೊಬೈಲ್ ಒದಗಿಸಲಾಗಿದೆ. ಸಂಪರ್ಕ ಹಾಗೂ ಸಾರಿಗೆಗೆ ಬೇಕಾದ ಎಲ್ಲ ವ್ಯವಸ್ಥೆ ಇದೆ ಎಂದು ದಾವಣಗೆರೆ ವಿಭಾಗದ ಅಧಿಕಾರಿಗಳು ತಿಳಿಸಿದರು.
`ಹರಿಹರ ವಿಭಾಗವು ಹೊನ್ನಾಳಿ, ಹರಿಹರ ಹಾಗೂ ಹರಪನಹಳ್ಳಿ ತಾಲ್ಲೂಕುಗಳನ್ನು ಒಳಗೊಂಡಿದೆ. 19 ಶಾಖಾಧಿಕಾರಿಗಳು ಇದ್ದಾರೆ. ಮೂವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿದ್ದಾರೆ. ಪ್ರತಿ ಶಾಖೆಗೆ ಒಂದೊಂದು ಮಾರುತಿ ಓಮ್ನಿ ನೀಡಲಾಗಿದೆ. ಒಂದೊಂದು ವಾಹನಕ್ಕೆ 12ರಂತೆ ಮಾನವ ಸಂಪನ್ಮೂಲ ಒದಗಿಸಲು ಹೊರಗುತ್ತಿಗೆ ಮೇಲೆ ನೇಮಕಕ್ಕೆ ಟೆಂಡರ್ ಕರೆಯಲಾಗಿದೆ. ಈಗಾಗಲೇ `ಮುಂಗಾರು ಪೂರ್ವ ಗ್ಯಾಂಗ್' ಕಾರ್ಯಾರಂಭಿಸಿದೆ. ಅವಘಡಗಳು ಸಂಭವಿಸಿದಲ್ಲಿ ಶೀಘ್ರವಾಗಿ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಹರಿಹರ ವಿಭಾಗದ ಎಇ ಡಿ.ಮಹೇಶ್ವರಪ್ಪ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು. `ಭಾಗ್ಯಜ್ಯೋತಿ ಗ್ರಾಹಕರಿಂದ ಹಿಡಿದು ರೈತರ ಪಂಪ್‌ಸೆಟ್‌ಗಳವರೆಗೆ ತೊಂದರೆ ಕಂಡುಬಂದಲ್ಲಿ ತುರ್ತಾಗಿ ಸ್ಪಂದಿಸಲಾಗುವುದು. ಕುಡಿಯುವ ನೀರು ಪೂರೈಕೆ ಹಾಗೂ ಹಳ್ಳಿಗಳಲ್ಲಿನ ಸಮಸ್ಯೆಗೆ ಆದ್ಯತೆ ಇರುತ್ತದೆ. ಮಾರ್ಗ ನಿರ್ವಹಣೆಗೆ ಅಗತ್ಯ ವಿದ್ಯುತ್ ಕಂಬ, ತಂತಿಗಳು, ಟಿಸಿ ಇದೆ; ಅಗತ್ಯ ಬಿದ್ದರೆ ಖರೀದಿಸಲು ಅವಕಾಶವಿದೆ' ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.