ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೈಸಿಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 6:55 IST
Last Updated 22 ಜನವರಿ 2011, 6:55 IST

ದಾವಣಗೆರೆ: ನಗರದ ನೇತಾಜಿ ಒಳ ಕ್ರೀಡಾಂಗಣದ ಮುಂದೆ ನೇತಾಜಿ ಪ್ರತಿಮೆ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಬೈಸಿಕಲ್ ಜಾಥಾ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಅಧಿಕಾರದ ದಾಹಕ್ಕಾಗಿ ಕೀಳುಮಟ್ಟದ ರಾಜಕೀಯ ನಡೆಸುತ್ತಿವೆ. ದೇಶದ ನಿರುದ್ಯೋಗ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ವಿಫಲವಾಗಿದೆ. ಭ್ರಷ್ಟಾಚಾರ ಮಿತಿಮೀರಿದೆ. ಕೂಡಲೇ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಅಶ್ಲೀಲತೆಯಿಂದಾಗಿ ಯುವಕರು, ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ. ಇದೂ ಸಾಲದು ಎಂಬಂತೆ ರಾಜ್ಯ ಸರ್ಕಾರ ಬಾರ್‌ಗಳಲ್ಲೇ ತಾಜಾ ಬಿಯರ್ ತಯಾರಿಕೆಗೆ ಅನುಮತಿ ನೀಡುತ್ತಿದೆ. ಮೊದಲು ಸರ್ಕಾರ ಜನರಿಗೆ ನೀರು ಕೊಡಲಿ, ನಂತರ ಬೀರು ವಿತರಿಸಲಿ ಎಂದು ಕುಟುಕಿದರು.

ನೇತಾಜಿ ಒಳಕ್ರೀಡಾಂಗಣದಿಂದ ಜಯದೇವ ವೃತ್ತದವರೆಗೆ ಬೈಸಿಕಲ್ ಜಾಥಾ ಹೊರಟ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಂಘಟನೆಯ ಮುಖಂಡರಾದ ಕುಕ್ಕುವಾಡ ಮಂಜುನಾಥ್, ಮಂಜುನಾಥ್ ರೆಡ್ಡಿ, ತಿಪ್ಪೇಸ್ವಾಮಿ, ಹರಿಪ್ರಸಾದ್, ಶಿವರಾಜ್, ಗುರು, ರಾಜು, ತಿಪ್ಪೇಸ್ವಾಮಿ, ಕಾವ್ಯಾ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.