ADVERTISEMENT

ಬೌದ್ಧಿಕ ಸಂಪತ್ತುಗಳಿಸಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 4:45 IST
Last Updated 4 ಆಗಸ್ಟ್ 2012, 4:45 IST

ದಾವಣಗೆರೆ: ಶಿಕ್ಷಣ ಎಂದರೆ ಕೇವಲ ಉದ್ಯೋಗದ ಮಾರ್ಗವಲ್ಲ. ಒಳ್ಳೆಯ ಕೌಶಲ, ನಡೆ-ನುಡಿ  ಕಲಿಸುವಂತಹದ್ದು ಎಂದು ಡಿಡಿಪಿಯು ರಂಗನಾಥ್ ಅಭಿಪ್ರಾಯಪಟ್ಟರು.

ನಗರದ ಬಾಪೂಜಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ ಎಂ. ವಿಶ್ವೇಶ್ವರಯ್ಯ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.

ಎಲ್ಲರೂ ಬುದ್ಧಿವಂತರೇ ಇರುತ್ತಾರೆ. ಆದರೆ, ಅದನ್ನು ಹೊರ ಹೊಮ್ಮಿಸುವುದಕ್ಕೆ ಶಿಕ್ಷಣ ಅಗತ್ಯ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಇಂದು ನಾವು ಮಾಡಿದ ಸಾಧನೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆಯೇ ಹೊರತು, ಗಳಿಸಿದ ಆಸ್ತಿ, ಹಣ ಅಲ್ಲ. ಭೌತಿಕ ಸಂಪತ್ತನ್ನು ಯಾರು ಬೇಕಾದರೂ ಲೂಟಿ ಮಾಡಬಹುದು.
 
ಆದರೆ, ನಾವು ಗಳಿಸಿದ ಜ್ಞಾನವನ್ನು ಯಾರೂ ಲೂಟಿ ಮಾಡಲು ಸಾಧ್ಯವಿಲ್ಲ. ಬುದ್ಧಿವಂತರನ್ನು ಸಮಾಜದಲ್ಲಿ ಜಾತಿ-ಮತ-ಬೇಧ ಮರೆತು ಎಲ್ಲರೂ ಗೌರವಿಸುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎಸ್‌ಡಿಆರ್‌ಪಿಯ ಕಾರ್ಯ ನಿರ್ವಾಹಕ ಎಂಜಿನಿಯರ್  ಡಾ.ಎಲ್.ಎಚ್. ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಡಾಕ್ಟರ್, ಎಂಜಿನಿಯರ್ ಆಗದೇ ಅನ್ವಯಿಕ ವಿಜ್ಞಾನದ ಕಡೆ ಒಲವು ಬೆಳಿಸಿಕೊಂಡು ಸಂಶೋಧನೆಯಲ್ಲಿ ತೊಡಗಬೇಕು ಎಂದು ಸಲಹೆ  ನೀಡಿದರು.

ಇಂದು ಭಾರತದಲ್ಲಿ ಆರು ಲಕ್ಷ ಹಳ್ಳಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇದನ್ನು ಮನಗಂಡು ಧರ್ಮಸ್ಥಳ ಕಿರುಸಾಲ ಯೋಜನೆ ಆರಂಭವಾಗಿದೆ. ಈ ಸಂಸ್ಥೆ ನಗರದಲ್ಲೂ ಕಾರ್ಯ ನಿರ್ವಹಿಸುತ್ತಿದೆ. ಭವಿಷ್ಯದಲ್ಲಿ ಯುವಕರು ಹಳ್ಳಿಯಲ್ಲಿ  ಕೆಲಸ ಮಾಡಲು ಪ್ರಯತ್ನಿಸಬೇಕು. ಇಂದು ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲು ಯುವಕರ ಅವಶ್ಯಕತೆ ಇದೆ.  ಸರ್ಕಾರದ ಎಲ್ಲಾ ಯೋಜನೆಗಳು ಶ್ರೀಮಂತರಿಗೆ ಲಭಿಸುತ್ತಿವೆ. ಈ ದೇಶದ ಕಟ್ಟ ಕಡೆಯ ವ್ಯಕ್ತಿಗೆ ಯಾವುದೇ ಸೌಲಭ್ಯಗಳು ಲಭ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾಲೇಜಿನ 36 ಮಂದಿ  ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ನಂದಮೋಹನ್ ಪ್ರಾರ್ಥಿಸಿದರು. ರಂಜಿತಾ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯ್ಡು ಪ್ರಾಸ್ತಾವಿಕ ಮಾತನಾಡಿದರು.

ಅಖಿಲಾ ಶ್ರೀಧರ್ ಮತ್ತು ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸಯೀದಾ ಅಂಜುಂ ವಂದಿಸಿದರು. ಕಾರ್ಯದರ್ಶಿ ಎಸ್.ಜೆ. ಶ್ರೀಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.