ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಯಡಿ ಸಮಗ್ರ ನೀರಾವರಿಗೆ ಒತ್ತಾಯಿಸಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಹೋರಾಟ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಆರೋಪಿಸಿದ್ದಾರೆ.
ತಾಲ್ಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ್ಙ 3ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಮಗ್ರ ನೀರಾವರಿಗೆ ಆಗ್ರಹಿಸಿ ನೀರಾವರಿ ಹೋರಾಟ ಸಮಿತಿ ವತಿಯಿಂದ ಏ. 16ರಂದು ಕರೆ ನೀಡಲಾಗಿರುವ ಧರಣಿ ಸತ್ಯಾಗ್ರಹ ರಾಜಕೀಯ ಪ್ರೇರಿತವಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದವವರು ವ್ಯವಸ್ಥಿತವಾದ ಪಿತೂರಿಯಲ್ಲಿ ನಿರತರಾಗಿದ್ದಾರೆ ಎಂದು ಅವರು ಹರಿಹಾಯ್ದರು.
`ನೀರಾವರಿ ಯೋಜನೆ ಜಾರಿಗಾಗಿ ಸಂಸದನಾಗಿ ನಾನು ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಅವರ ಪ್ರಾಮಾಣಿಕ ಪ್ರಯುತ್ನದ ಫಲವಾಗಿ ಪ್ರಥಮ ಹಂತದಲ್ಲಿ 18 ಸಾವಿರ ಎಕರೆಗೆ ನೀರಾವರಿಯಾಗಲಿದೆ. ಆದರೆ, ರಾಜಕೀಯ ದ್ವೇಷದಿಂದ ಪ್ರತಿಭಟನೆಯ ಸಂದರ್ಭದಲ್ಲಿ ಹೋರಾಟ ಸಮಿತಿಯವರು ನನ್ನ ಪ್ರತಿಕೃತಿಯನ್ನು ದಹನ ಮಾಡಿದ್ದು ನೋವು ತಂದಿದೆ. ನೀರಾವರಿ ಹೋರಾಟದ ನೆಪದಲ್ಲಿ ಚುನಾವಣಾ ಗಿಮಿಕ್ ಮಾಡಲಾಗುತ್ತಿದೆ~ ಎಂದು ಅವರು ಕಿಡಿಕಾರಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ತಾಲ್ಲೂಕಿಗೆ ಇದುವರೆಗೆ 11 ಸಾವಿರ ಮನೆಗಳು ಮಂಜೂರಾಗಿವೆ. ಈಗ ಮತ್ತೆ 3 ಸಾವಿರ ಮನೆಗಳನ್ನು ವಸತಿ ಸಚಿವ ಸೋಮಣ್ಣ ಅವರು ಮಂಜೂರು ಮಾಡಿದ್ದಾರೆ. ಕ್ಷೇತ್ರದಲ್ಲಿರುವ ಕುಗ್ರಾಮದ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳ ಡಾಂಬರೀಕರಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಬರಪರಿಹಾರ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.
ಮುಗ್ಗಿದರಾಗಿಹಳ್ಳಿ, ಗುರುಸಿದ್ದಾಪುರ, ಬಂಗಾರಕ್ಕನಗುಡ್ಡ, ಚಿಕ್ಕಮಲ್ಲನಹೊಳೆ, ಸಿದ್ದಿಹಳ್ಳಿ, ಮುಸ್ಟೂರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನಿಡಲಾಯಿತು.
ತಾ.ಪಂ. ಅಧ್ಯಕ್ಷ ಶಾಂತವೀರಪ್ಪ, ಜಿ.ಪಂ. ಸದಸ್ಯ ಎಚ್. ನಾಗರಾಜ್, ಎಚ್.ಸಿ. ಮಹೇಶ್, ಹನುಮಂತಾಪುರ ಕೃಷ್ಣಮೂರ್ತಿ, ಗುರುಮೂರ್ತಿ, ಅಮರೇಂದ್ರಪ್ಪ, ಪ್ರದೀಪ್, ಎಪಿಎಂಸಿ ಸದಸ್ಯ ರಘುರಾಮರೆಡ್ಡಿ, ಅರವಿಂದ ಪಾಟೀಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.