ADVERTISEMENT

ಭೂಕಬಳಿಕೆ ಸಂಚಿಗೆ ಶಾಸಕರ ಕುಮ್ಮಕ್ಕು: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:40 IST
Last Updated 15 ಸೆಪ್ಟೆಂಬರ್ 2011, 6:40 IST

ಹರಪನಹಳ್ಳಿ: `ಪಟ್ಟಣದ ಜೀವನಾಡಿಯಾಗಿರುವ ಹಿರೆಕೆರೆಯ ಒಡಲಾಳ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿನ ನಿವೇಶನಗಳ ಜಾಗ ಕಬಳಿಸಲು ಬಿಜೆಪಿ ಮುಖಂಡರು ಸಂಚು ರೂಪಿಸಿದ್ದು, ಈಗಾಗಲೇ ನೋಂದಣಿಗಾಗಿ ಭರದ ಸಿದ್ಧತೆಯೂ ನಡೆದಿದ್ದು, ಇದಕ್ಕೆ ಶಾಸಕ ಕರುಣಾಕರ ರೆಡ್ಡಿ ಕುಮ್ಮಕ್ಕು ನೀಡುತ್ತಿದ್ದಾರೆ~ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ. ಹಾಲೇಶ್ ಬಿಜೆಪಿ  ವಿರುದ್ಧ ಗಂಭೀರ ಆರೋಪ ಮಾಡಿದರು.

ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ  ಅವರು ಮಾತನಾಡಿದರು.

ಪಾಳೇಗಾರರ ಕಾಲದಲ್ಲಿ ನಿರ್ಮಾಣವಾಗಿದ್ದ ಪಟ್ಟಣದ ಜೀವನಾಡಿಯಂತಿರುವ ಹಿರೆಕೆರೆಯ ಅಂಗಳದಲ್ಲಿನ ಅರ್ಧಭಾಗ ಹಾಗೂ ಪುರಸಭಾ ವ್ಯಾಪ್ತಿಯ 5 ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿನ ಖಾಲಿ ನಿವೇಶನದ ಜಾಗವನ್ನು ಕಬಳಿಸಲು ಕೆಲ ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಸುಮಾರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನ ಹಾಗೂ ಕೆರೆಯಂಗಳದ ಗರ್ಭಕ್ಕೂ ಕನ್ನಹಾಕಲು ಸಿದ್ಧತೆಗಳು ನಡೆದಿವೆ.

ಕುಂಚೂರು, ಗುಂಡಗತ್ತಿ, ಯಡಿಹಳ್ಳಿ, ಹಲುವಾಗಲು ಕೆರೆಗಳ ಪುನಶ್ಚೇತನಕ್ಕಾಗಿ ಬಿಡುಗಡೆಯಾಗಿರುವ ಕೋಟ್ಯಂತರ ರೂಗಳ ಅನುದಾನವನ್ನು ಸಹ, ಕಾಮಗಾರಿ ನಡೆಸದೇ,  ಬಿಲ್ ಡ್ರಾ ಮಾಡಿಕೊಳ್ಳಲಾಗಿದೆ.

ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಅಧಿಕಾರ ಅವಧಿಯಲ್ಲಿ ್ಙ 400ಕೋಟಿ  ಬಿಡುಗಡೆ ಮಾಡಿಸಿರುವುದಾಗಿ ಶಾಸಕರು ಹೇಳುತ್ತಿದ್ದಾರೆ. ಆದರೆ, ಹರಿದು ಬಂದಿರುವ ಅನುದಾನ ಬಿಜೆಪಿ ಮುಖಂಡರ ಜೇಬಿಗೆ ಭರ್ತಿ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ.ಪಿ. ರವೀಂದ್ರ ಮಾತನಾಡಿ, ಬಕಾಸುರ ಸಂಸ್ಕೃತಿ ವಾರಸುದಾರರಾದ ಹಾಗೂ ಅನುಭವದ ಕೊರತೆ ಇರುವ  ಸರ್ಕಾರದ ಸಚಿವರು ಹಾಗೂ ಶಾಸಕರು ಅಧಿಕಾರಕ್ಕೆ ಬಂದಿರುವುದೇ ಕಬಳಿಕೆ ಮಾಡಲು ಎಂಬ ನೀತಿಗೆ ಅಂಟಿಕೊಂಡಿದ್ದಾರೆ.  ಒಬ್ಬರ ಮೇಲೊಬ್ಬರು ನಾ ಮುಂದು-ತಾ ಮುಂದು ಎಂಬಂತೆ ಜೈಲು ಪಾಲಾಗುತ್ತಿದ್ದಾರೆ. ನೈಸರ್ಗಿಕ ಸಂಪತ್ತಿನ ಮೇಲೆ ಅತ್ಯಾಚಾರ ನಡೆಸಿ, ರಾಜಕಾರಣವನ್ನು ಕಲುಷಿತಗೊಳಿಸಿದ ಬಳ್ಳಾರಿಯ ರೆಡ್ಡಿಗಳ ಪಾಪದ ಕೊಡ ತುಂಬಿಕೊಂಡಿದೆ. ಅದರ ಮೊದಲ ಭಾಗವಾಗಿ ಜನಾರ್ದನರೆಡ್ಡಿ ಜೈಲು ಸೇರಿದ್ದಾರೆ. ಉಳಿದ ಸಹೋದರರು ಅಕ್ರಮ ಸಂಪತ್ತನ್ನು ಮುಚ್ಚಿಹಾಕುವ ಹರಸಾಹಸದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎ.ಎಂ. ವಿಜಯಕುಮಾರ್, ಪುರಸಭಾ ಸದಸ್ಯ ಎಂ.ವಿ. ಅಂಜಿನಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಬೇಲೂರು ಅಂಜಪ್ಪ, ವಕೀಲ ಮತ್ತಿಹಳ್ಳಿ ಅಜ್ಜಣ್ಣ, ಜಾವೀದ್ ಮಾತನಾಡಿದರು.

ಹಿರಿಯ ವಕೀಲ ಟಿ.ಎಚ್.ಎಂ. ವಿರೂಪಾಕ್ಷಯ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷ ಎಂ. ಚನ್ನಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಂ. ಬಸವರಾಜಯ್ಯ, ಪುರಸಭಾ ಸದಸ್ಯರಾದ ಮಟ್ಟಿ ಮೃತ್ಯುಂಜಯ, ಶುಕುರ್ ಸಾಹೇಬ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.