ADVERTISEMENT

ಭೂಸ್ವಾಧೀನ ವಿರೋಧಿಸಿ ಅರೆಬೆತ್ತಲೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 10:40 IST
Last Updated 4 ಜನವರಿ 2011, 10:40 IST

ದಾವಣಗೆರೆ: ನಗರದ ಹೊರವಲಯದ ಕುಂದುವಾಡದಲ್ಲಿ ಕರ್ನಾಟಕ ರಾಜ್ಯ ಗೃಹಮಂಡಳಿಯು ರೈತರ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಗೃಹನಿರ್ಮಾಣ ಮಂಡಳಿಗೆ ಬೀಗ ಜಡಿಯಲು ಯತ್ನಿಸಿದರು.

ರೈತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿ ಕೊಳ್ಳಲಾಗಿದೆ. ಪ್ರತಿ ಎಕರೆಗೆ ರೂ. 5 ಲಕ್ಷ ಪರಿಹಾರ ನಿಗದಿಯಾಗಿತ್ತು. ಆದರೆ, ಅದರಂತೆ ನಡೆದುಕೊಳ್ಳದೆ ಕೇವಲ ರೂ.3, 4 ಲಕ್ಷ ಪರಿಹಾರ ನೀಡಲಾಗಿದೆ. ಜಮೀನು ಕಳೆದು ಕೊಂಡವರಿಗೆ 60x40ರ ನಿವೇಶನ ನೀಡುವುದಾಗಿ ಗೃಹ ಮಂಡಳಿ ಭರವಸೆ ನೀಡಿತ್ತು. ಆದರೆ, ಈಗ ಕೇವಲ ಒಂದೂವರೆ ಎಕರೆಗಿಂತ ಅಧಿಕ ಭೂಮಿ ಕಳೆದುಕೊಂಡವರಿಗೆ ಮಾತ್ರ ಭೂಮಿ ನೀಡುವುದಾಗಿ ಹೇಳುತ್ತಿದೆ. ಉಳಿದವರು ಎಲ್ಲಿಗೆ ಹೋಗಬೇಕು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ನಗರದ ಬೀರಲಿಂಗೇಶ್ವರ ದೇವಸ್ಥಾನದಿಂದ ಅರೆಬೆತ್ತಲೆಯಾಗಿ ಮೆರವಣಿಗೆ ಹೊರಟ ರೈತರು ಪಿಜೆ ಬಡಾವಣೆಯ ಗೃಹ ಮಂಡಳಿಯ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯಲು ಯತ್ನಿಸಿದರು. ಸ್ಥಳಕ್ಕೆ ಆಗಮಿಸಿದ ಗೃಹಮಂಡಳಿ ಅಧಿಕಾರಿ ಕೃಷ್ಣಮೂರ್ತಿ ಅವರು, ಭೂಸ್ವಾಧೀನ ವಿಷಯಕ್ಕೆ ಸಂಬಂಧಿಸಿ ಜ. 6ಕ್ಕೆ ರೈತ ಮುಖಂಡರ ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ಪರಿಹಾರ, ನಿವೇಶನ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಭರವಸೆ ನೀಡಿದರು.

ಏನೇ ಆದರೂ, ಸೂಕ್ತ ನಿರ್ಣಯಕ್ಕೆ ಬರುವವರೆಗೆ ಹೋರಾಟ ಮುಂದುವರಿಸುವುದಾಗಿ ರೈತರು ತಿಳಿಸಿದರು. ಹುಚ್ಚವ್ವನಹಳ್ಳಿ ಮಂಜುನಾಥ್, ಎಚ್.ಜಿ. ಗಣೇಶಪ್ಪ, ಎಚ್.ಜಿ. ದೊಡ್ಡಪ್ಪ, ಗೌಡ್ರ ಬಸವರಾಜಪ್ಪ, ಎಸ್. ಮಾಲತೇಶ್, ಜಿ.ಸಿ. ದೇವರಾಜ್, ಮಲ್ಲಾಪುರ ರೇಣುಕಮ್ಮ, ಜಿ.ಬಿ. ನಾಗರಾಜ್ ಇತರರು ನೇತೃತ್ವ ವಹಿಸಿದ್ದರು.

ಕಾರ್ಯಕಾರಿ ಸಮಿತಿ ರಚನೆ
ದಾವಣಗೆರೆ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ಗೆ ಈಚೆಗೆ ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ವಿವರ ಈ ಕೆಳಕಂಡಂತೆ ಇದೆ.
ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ (ಅಧ್ಯಕ್ಷ), ಹರಿಹರ ಶಾಸಕ ಬಿ.ಪಿ. ಹರೀಶ್, ಬಸವರಾಜನಾಯ್ಕ, ಜಿ. ಕಲ್ಲೇಶ, ಡಾ.ಸುಬೋಧ್ ಶೆಟ್ಟಿ, ನಾಗೇಶ್ವರ್ ರಾವ್, ಎಚ್. ತಿಪ್ಪೇಸ್ವಾಮಿ (ಉಪಾಧ್ಯಕ್ಷ), ಆರ್. ನಟರಾಜನ್ (ಕಾರ್ಯದರ್ಶಿ), ಎಚ್.ಆರ್. ಹುಚ್ಚೆಂಗಪ್ಪ, ಸಣ್ಣರೆಡ್ಡಿನಾಯ್ಕಿ, ಜೆ. ರಾಜು, ಸತ್ಯಪ್ರಸಾದ್ ಅಜಿಲ್, ಎಂ. ಅಂಬಾಸ್ (ಸಹ ಕಾರ್ಯದರ್ಶಿ), ಎನ್. ಮಂಜುನಾಥ್ (ಖಜಾಂಚಿ), ಆರ್.ಎಸ್. ಬದ್ರಿನಾಥ್, ಎಸ್. ಡೇವಿಡ್, ರಾಜೇಶ್, ಪಿ. ಜಯರಾಮನ್, ವಾಲಿ ವಿಜಯಕುಮಾರ್, ಆರ್.ವಿ. ಶಿರಸಾಲಿಮಠ, ಎಲ್.ಪಿ. ರಂಗನಾಥ, ಬಿ. ಹೋನೋಜಿರಾವ್, ಕೆ.ಎಸ್. ಧರ್ಮರಾಜ್, ಜಿ.ಎಚ್. ಮೌಳೇಶ್, ಪುರುಷೋತ್ತಮ, ಚಂದ್ರಶೇಖರ್, ಗುರುಮೂರ್ತಿ, ಎಸ್.ಡಿ. ಮಂಜುನಾಥ್, ಮುತ್ತವೇಲು, ಸರಸ್ವತಿ (ಸದಸ್ಯರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.