ADVERTISEMENT

ಭ್ರಷ್ಟ ಬಿಜೆಪಿ ಸರ್ಕಾರ ವಜಾಗೊಳಿಸಿ: ಬಸವರಾಜ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 9:07 IST
Last Updated 21 ಡಿಸೆಂಬರ್ 2012, 9:07 IST

ಜಗಳೂರು: ರಾಜ್ಯ ಸರ್ಕಾರದ 34 ಸಚಿವರಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ 18 ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪದ ಕ್ರಿಮಿನಲ್ ಪ್ರಕರಣಗಳಿದ್ದು, ಕಡುಭ್ರಷ್ಟ ಬಿಜೆಪಿ ಸರ್ಕಾರವನ್ನು  ಕೂಡಲೇ ವಜಾಗೊಳಿಸಬೇಕು ಎಂದು ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಒತ್ತಾಯಿಸಿದರು.

ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಉಪ ಮುಖ್ಯಮಂತ್ರಿಗಳಾದಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಕಾನೂನು ಸಚಿವ ಸುರೇಶ್ ಕುಮಾರ್ ಅವರ ಮೇಲೂ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.

ಬಹುತೇಕ ಸಚಿವರು ಭಷ್ಟಾಚಾರದಲ್ಲಿ ನಿರತರಾಗ್ದ್ದಿದು, ಸರ್ಕಾರದ ಕೊನೆಯ ದಿನದವರೆಗೂ  ಲೂಟಿ ಮಾಡಲು  ಸಿದ್ಧರಾಗಿದ್ದಾರೆ. ಈ  ವಿಷಯದಲ್ಲಿ  ಮುಖ್ಯಮಂತ್ರಿಜಗದೀಶ್ ಶೆಟ್ಟರ್  ಹಾಗೂ ಯಡಿಯೂರಪ್ಪ  ಅವರ  ಮಧ್ಯೆ ಒಳ ಒಪ್ಪಂದವಾಗಿದೆ. ಬಿಜೆಪಿಯ ಬಹುತೇಕ ಸಚಿವರು ಬಹಿರಂಗವಾಗಿ ಕೆಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರ ನಡೆಸಲು ಶೆಟ್ಟರ್ ಅವರಿಗೆ ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 8 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಮುಖಂಡ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಲೋಕಸಭಾ ಚುನಾವಣೆಯಲ್ಲಿ ಅಧಿಕ ಅಂತರದಿಂದ ಗೆಲವು ಪಡೆಯಲಿದ್ದಾರೆ ಎಂದು ಬಸವರಾಜ್ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಶಾಸಕರು ಬಹಿರಂಗ ಚರ್ಚೆಗೆ ಬರಲಿ. ಪೈಕಾ ಕ್ರೀಡಾಕೂಟದಲ್ಲಿ ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ದುಡಿಯಲಾಗುವುದು ಎಂದು ಮುಖಂಡ ಎಚ್.ಪಿ. ರಾಜೇಶ್ ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಕಡತಿ ತಿಪ್ಪೇಸ್ವಾಮಿ, ಬೈರೇಶ್, ಗಿರೀಶ್ ಒಡೆಯರ್, ಎಸ್.ಕೆ. ರಾಮರೆಡ್ಡಿ, ಬೋರಪ್ಪ ನಾಯಕ, ವೆಂಕಟೇಶ್, ವೈ.ಎನ್. ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT