ADVERTISEMENT

ಮಂಡಕ್ಕಿ ಭಟ್ಟಿ ಆಧುನೀಕರಣಕ್ಕೆ ₹ 372.90 ಕೋಟಿ

ಮಂಡಿಪೇಟೆ ಸ್ಮಾರ್ಟ್‌ಗೆ ₹102.91 ಕೋಟಿ, ದುರ್ಗಾಂಬಿಕಾ ದೇವಸ್ಥಾನಕ್ಕೂ ಯೋಗ: ಡಿಸಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 8:50 IST
Last Updated 30 ಜನವರಿ 2016, 8:50 IST
ದಾವಣಗೆರೆ ನಗರ ರಾತ್ರಿ ಬೆಳಕನಲ್ಲಿ ಕಂಡ ಬಗೆ.
ದಾವಣಗೆರೆ ನಗರ ರಾತ್ರಿ ಬೆಳಕನಲ್ಲಿ ಕಂಡ ಬಗೆ.   


ದಾವಣಗೆರೆ:ಸ್ಮಾರ್ಟ್‌ ಸಿಟಿ ಪ್ರಸ್ತಾವದಲ್ಲಿ ಮಂಡಕ್ಕಿಭಟ್ಟಿ ಸ್ಥಳಾಂತರಗೊಳಿಸುವ ಯೋಜನೆ ಇಲ್ಲ. ಆದರೆ, ಸುಮಾರು 75 ಎಕರೆ ವಿಸ್ತೀರ್ಣದಲ್ಲಿರುವ ಆ ಪ್ರದೇಶವನ್ನು ಸಂಪೂರ್ಣ ಆಧುನೀಕ ರಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಟಿ. ಅಂಜನ್‌ಕುಮಾರ್ ಸ್ಪಷ್ಪಪಡಿಸಿದರು.

ಸಾವಿರಕ್ಕೂ ಹೆಚ್ಚಿರುವ ಮಂಡಕ್ಕಿಬಟ್ಟಿಗಳನ್ನು ಸಂಪೂರ್ಣ ಬದಲಿಸಲಾಗುತ್ತದೆ. ಹೊಗೆ ಸೂಸಿ ಮಾಲಿನ್ಯಕ್ಕೆ ಕಾರಣವಾಗುವ ಮಂಡಕ್ಕಿಬಟ್ಟಿ ತೆಗೆದುಹಾಕಿ ಅವುಗಳ ಸ್ಥಾನದಲ್ಲಿ ವಿದ್ಯುತ್‌ ಚಾಲಿತ ಆತ್ಯಾಧುನಿಕ ಮತ್ತು ಪರಿಸರ ಸ್ನೇಹಿ ಯಂತ್ರಗಳನ್ನು ಅಳವಡಿಸಲಾಗುತ್ತದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಮೂಲಕ ಹೆಚ್ಚು ಉತ್ಪಾದನೆ, ಪರಿಸರ ಮಾಲಿನ್ಯ ಕಡಿಮೆ ಗೊಳಿಸಲಾಗುತ್ತದೆ. ಈ ಕೆಲಸಕ್ಕಾಗಿ ₹372.90 ಕೋಟಿ ಅನುದಾನ ವೆಚ್ಚ ಮಾಡಲಾಗುವುದು ಎಂದರು.

ಅದೇ ರೀತಿ ತ್ಯಾಜ್ಯ ಸಂಸ್ಕರಣೆ, ಫುಟ್‌ಪಾತ್, ರಸ್ತೆಯಲ್ಲಿ ಸೈಕಲ್‌ ಮಾರ್ಗ, ಒಳಚರಂಡಿ ವ್ಯವಸ್ಥೆ, ಸುರಂಗ ಮಾರ್ಗ, ಮೀಟರ್‌ ಆಧಾರಿತ 24X7 ನಿರಂತರ ಕುಡಿಯುವ ನೀರು ಪೂರೈಕೆ ಹಾಗೂ ಪ್ರತಿ ಹೊಸ ಕಟ್ಟಡಗಳ ಮೇಲೆ ಸೋಲಾರ್‌ ವಿದ್ಯುತ್‌ ಘಟಕ ಅಳವಡಿಕೆ ಕಡ್ಡಾಯಗೊಳಿಸಲಾಗುತ್ತದೆ. ಇದಕ್ಕಾಗಿ ₹301.90 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಆಧುನಿಕ ಮಂಡಿಪೇಟೆ; ಸುಮಾರು 10 ಎಕರೆ ವಿಸ್ತೀರ್ಣದಲ್ಲಿರುವ ಮಂಡಿಪೇಟೆಯನ್ನು ₹102.91 ಕೋಟಿ ವೆಚ್ಚದಲ್ಲಿ ಸಂಪೂರ್ಣ ಆಧುನೀಕರಣ ಗೊಳಿಸಲಾಗುತ್ತದೆ. ಮಂಡಿಪೇಟೆಯಲ್ಲಿ ಬಹುಮಹಡಿ ಸಂಕೀರ್ಣ ಜತೆಗೆ ಸುಸಜ್ಜಿತ ವಾಹನ ನಿಲುಗಡೆ, ,ಮಾಹಿತಿ ನೀಡುವ ಕಿಯೋನಿಕ್ಸ್‌ ಅಲ್ಲಿ ಸ್ಥಾಪನೆಯಾಗಲಿವೆ. 150 ಬೆಡ್‌ ಆಸ್ಪತ್ರೆ ಪುನರ್‌ ನವೀಕರಣ ಹಾಗೂ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ದೇವಸ್ಥಾನಕ್ಕೂ ಸ್ಮಾರ್ಟ್‌ ಯೋಗ; ದುರ್ಗಾಂಬಿಕಾ ದೇವಸ್ಥಾನದ ಸುತ್ತ ಮುತ್ತಲಿನ ಮೂರು ಎಕರೆ ಪ್ರದೇಶದ ಅಭಿವೃದ್ಧಿಗೊಳಿಸಲಾಗುತ್ತದೆ. ಈ ಪ್ರದೇಶದಲ್ಲಿ ಡಿಜಿಟಲ್‌ ಸಿಗ್ನಲ್, ವಸತಿ ಗೃಹ, ಸಾಂಸ್ಕೃತಿಕ ಭವನ ಮತ್ತಿತರ ಸೌಲಭ್ಯಗಳನ್ನು ಸುಮಾರು ₹6.67 ಕೋಟಿ ವೆಚ್ಚದಲ್ಲಿ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಹಳೆ ಬಸ್‌ನಿಲ್ದಾಣವನ್ನು ಸಂಪೂರ್ಣವಾಗಿ ಆಧುನೀಕರಣ ಗೊಳಿಸಲಾಗುವುದು. ಇದೇ ಸ್ಥಳವನ್ನು ಕೇಂದ್ರೀಕೃತಗೊಳಿಸಿ ಅಭಿವೃದ್ಧಿ ಗೊಳಿಸಲು ₹25 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದರು.

ಮನುಷ್ಯನ ದೈನಂದಿನ ವ್ಯವಹಾರಗಳಲ್ಲಿ ತಂತ್ರಜ್ಞಾನ ಬಳಕೆಗೆ ಅನುಕೂಲವಾಗುವ ದೃಷ್ಟಿಯಿಂದ ಹೊಸ ಹೊಸ ಆ್ಯಪ್‌ಗಳನ್ನು ರೂಪಿಸಲಾಗುತ್ತದೆ. ಸರ್ಕಾರಿ ಕಚೇರಿ ಹಾಗೂ ಸಾರ್ವಜನಿಕರ ಜತೆ ನೇರವಾಗಿ ಸಂಪರ್ಕಿಸಲು ಅನುಕೂಲವಾಗಲು ಯೂನಿಕ್‌ ನಂಬರ್ ನೀಡುವ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ಇದಕ್ಕಾಗಿ ₹38.44 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.

ಇಡೀ ನಗರದ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ನಿಲ್ದಾಣ ಕುರಿತಂತೆ ಬಸ್‌ಗಳಲ್ಲಿ ಡಿಜಿಟಲ್‌ ಡಿಸ್‌ಪ್ಲೇ, ಸೋಲಾರ್ ಆಧಾರಿತ ತುಂಗುದಾಣ ಮತ್ತಿತರ ಕೆಲಸಗಳಿಗಾಗಿ ₹459.35 ಕೋಟಿ ವೆಚ್ಚ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪ ಆಯುಕ್ತರಾದ ಮಹಾಂತೇಶ್, ರವೀಂದ್ರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.