ADVERTISEMENT

ಮಕ್ಕಳಿಗೆ ಪರಂಪರೆ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 4:00 IST
Last Updated 22 ಅಕ್ಟೋಬರ್ 2012, 4:00 IST

ದಾವಣಗೆರೆ: ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಸಾಹಿತಿ ಬಿ.ಟಿ. ಜಾಹ್ನವಿ ಅಭಿಪ್ರಾಯಪಟ್ಟರು.

ವಿದ್ಯಾನಗರದ ಮಯೂರ ನಾಟ್ಯಶಾಲೆಯಿಂದ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದಲ್ಲಿ ನಡೆದ `ಮಯೂರೋತ್ಸವ- 2012~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಕಲೆಗಳಲ್ಲಿ ವಿಶೇಷತೆ ಇದೆ. ಕಲೆ ಬದುಕಿನ ಅವಿಭಾಜ್ಯ ಅಂಗ. ಕಲೆಯಿಂದ ಬದುಕು ಸಮೃದ್ಧಿಯಾದರೆ; ಬದುಕಿನಿಂದ ಕಲೆ ಬೆಳೆಯುತ್ತಾ ಹೋಗುತ್ತದೆ. ಬದುಕು ಸುಶೀಲವಾಗಿರ ಬೇಕಾದರೆ ಕಲೆ ಅಗತ್ಯ ಎಂದರು.

ಸಮಾಜದಲ್ಲಿ ಕಂದಾಚಾರ ಹೆಚ್ಚಾಗುತ್ತಾ ಕಲೆಯ ಆರಾಧನೆಯಲ್ಲಿ ಸಂಶಯ, ಗೊಂದಲ ಮೂಡುತ್ತಿವೆ. ಈ ಕಲೆ ನಮ್ಮದು ಎಂಬ ಗೌರವ, ಪ್ರೀತಿ ಇಲ್ಲದಿರುವುದು ಇದಕ್ಕೆ ಕಾರಣ. ನಮ್ಮ ಸಂಸ್ಕೃತಿ, ಪರಂಪರೆ ಅರಿಯದೇ ಪರಕೀಯರ ಸಂಸ್ಕೃತಿಯ ಅಬ್ಬರಕ್ಕೆ ಒಳಗಾಗಿದ್ದೇವೆ. ನಮ್ಮ ಪರಂಪರೆ ಅವಮಾನಿಸಿಕೊಳ್ಳುತ್ತಾ ಅತಂತ್ರ ಹಾಗೂ ತ್ರಿಶಂಕು ಸ್ಥಿತಿಯಲ್ಲಿ ಇಂದಿನ ಯುವ ಜನಾಂಗವಿದೆ ಎಂದು ವಿಷಾದಿಸಿದರು.

ನೂಪುರ ವಿದ್ಯಾಶಾಲೆಯ ಬಿ.ಎಸ್. ಬೃಂದಾ ಹಾಗೂ ಝೇಂಕಾರ ಸಂಗೀತ ಶಾಲೆಯ ಶೀಲಾ ನಟರಾಜ್ ಅವರಿಗೆ ಮಯೂರ ನಾಟ್ಯಶಾಲೆ ಸಂಯೋಜಕಿ ಜಿ.ಟಿ. ತನ್ಮಯಾ ಗುರುವಂದನೆ ಸಲ್ಲಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿವರುದ್ರಪ್ಪ ಅಧ್ಯಕ್ಷತೆ ವಹಿಸ್ದ್ದಿದರು. ವಿದ್ಯಾನಗರದ ಈಶ್ವರ, ಪಾರ್ವತಿ, ಗಣಪತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜಪ್ಪ, ಬಿಎಂಟಿ ಕಾಲೇಜು ಪ್ರಾಂಶುಪಾಲ ಜಿ.ಟಿ. ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.