ADVERTISEMENT

ಮತದಾನ ಜಾಗೃತಿಗೆ ಗಾಳಿಪಟ ಉತ್ಸವ

ನಗರದ ಹೈಸ್ಕೂಲ್‌ ಮೈದಾನದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 7 ಮೇ 2018, 9:36 IST
Last Updated 7 ಮೇ 2018, 9:36 IST
ಗಾಳಿಪಟ ಉತ್ಸವದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್‌. ರಮೇಶ್ ಪಟ ಹಾರಿಸಿದರು
ಗಾಳಿಪಟ ಉತ್ಸವದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್‌. ರಮೇಶ್ ಪಟ ಹಾರಿಸಿದರು   

ದಾವಣಗೆರೆ: ಮತ ಚಲಾವಣೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ನಗರದ ಹೈಸ್ಕೂಲ್‌ ಮೈದಾನದಲ್ಲಿ ಭಾನುವಾರ ಗಾಳಿಪಟದ ಉತ್ಸವ ಹಮ್ಮಿಕೊಂಡಿತ್ತು.

ಅಂತರರಾಷ್ಟ್ರೀಯ ಖ್ಯಾತಿಯ ವಿ. ಕೃಷ್ಣಾಜಿರಾವ್ ಅವರ ತಂಡ ಗಾಳಿಪಟದೊಂದಿಗೆ ಹಾಜರಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ‘ಮತದಾನದ ಪ್ರಮಾಣ ಹೆಚ್ಚಿಸಬೇಕೆನ್ನುವ ಉದ್ದೇಶದಿಂದ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿರುವುದು ಸಂತಸದ ವಿಚಾರ. ಇಂದಿನ ದಿನಗಳಲ್ಲಿ ಎಲ್ಲರಲ್ಲೂ ಮತ ಜಾಗೃತಿ ಮೂಡುತ್ತಿದೆ. ಹಲವಾರು ಸಂಘ, ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಎಸ್. ಅಶ್ವತಿ, ಪಟಗಳನ್ನು ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ನೀಡಿ ಅವುಗಳನ್ನು ಹೇಗೆ ಹಾರಿಸಬೇಕು. ಗಾಳಿಯ ದಿಕ್ಕಿಗೆ ಯಾವ ರೀತಿಯಲ್ಲಿ ಹಿಡಿದರೆ ಪಟ ಮೇಲೇರುತ್ತದೆಂಬುದನ್ನು ತೋರಿಸುತ್ತಿದ್ದರು.

ADVERTISEMENT

ನಂತರ ಮಾತನಾಡಿದ ಅವರು, ‘ಈಗಾಗಲೇ ಜಿಲ್ಲಾ ಸ್ವೀಪ್‌ ಸಮಿತಿಯಿಂದ ನೂರಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಸಾರ್ವಜನಿಕರು, ಮಹಿಳೆಯರು ಯುವ ಮತದಾರರು ಬಹಳ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ’
ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಿ.ಆರ್‌. ಷಡಕ್ಷರಪ್ಪ, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೀಸದ ಗಾಳಿ, ಏರದ ಪಟ

ಗಾಳಿಪಟ ಹಾರಿಸುವ ಕಾರ್ಯಕ್ರಮ ಬೆಳಿಗ್ಗೆ 8 ಗಂಟೆಗೆ ನಿಗದಿಯಾಗಿತ್ತು. 9 ಗಂಟೆಯಾದರೂ ಪಟ ಏರಿಸಲು ಬೇಕಾದ ಗಾಳಿ ಬೀಸಲಿಲ್ಲ. ಕೊನೆಗೆ ಪ್ರಯಾಸಪಟ್ಟು ಎರಡು ಗಾಳಿಪಟಗಳು ಮೇಲೇರಿ ಕ್ಷಣದಲ್ಲೇ ಕೆಳಗೆ ಬಿದ್ದವು. ಮೈದಾನದಲ್ಲೇ ಗಾಳಿಪಟ ಮಾರಾಟಕ್ಕೆ ಅವಕಾಶ ಕೊಡಲಾಗಿತ್ತು. ಸಾಕಷ್ಟು ಜನ ಗಾಳಿಪಟ ಕೊಂಡರೂ ಹಾರಿಸಲು ಆಗದೆ ನಿರಾಸೆ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.