ADVERTISEMENT

`ಮತ' ಮಾರಾಟ ಮಾಡಬೇಡಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 5:18 IST
Last Updated 9 ಏಪ್ರಿಲ್ 2013, 5:18 IST

ಮಲೇಬೆನ್ನೂರು: ಪ್ರಜಾಸತ್ತೆಯಲ್ಲಿ ಪ್ರಜೆಗಳು ಹಣ, ಹೆಂಡಕ್ಕೆ `ಮತ' ಮಾರಾಟ ಮಾಡದೇ, `ದಾನ' ಮಾಡುವ ಮೂಲಕ ಉತ್ತಮ ಚಾರಿತ್ರ್ಯ ಹೊಂದಿದ ಅಭ್ಯರ್ಥಿಗಳನ್ನು ಪಕ್ಷಾತೀತವಾಗಿ ಆಯ್ಕೆ ಮಾಡುವಂತೆ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಸಮೀಪದ ಕುಂಬಳೂರಿನ ಶರಣ ಕೆ.ಎನ್. ಹನುಮಂತಪ್ಪ ಅವರ ಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ `ಮನೆಯಲ್ಲಿ ಮಹಾಮನೆ' ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕೆಟ್ಟ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದಲ್ಲಿ ಕೆಟ್ಟ ಸರ್ಕಾರ ಬರುತ್ತದೆ. ಭ್ರಷ್ಟಾಚಾರ ತಾಂಡವವಾಡಿ ಸರ್ಕಾರದ ಉರುಳುತ್ತದೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಮತ್ತೆ ಮತ್ತೆ ಚುನಾವಣೆ ನಡೆದರೆ ಜನರ ತೆರಿಗೆ ಹಣ ಪೋಲಾಗುತ್ತದೆ. ಹಾಗಾಗಿ, ಯೋಚಿಸಿ ಮತದಾನ ಮಾಡಿ ಎಂದು ಭಕ್ತರಿಗೆ ಕಿವಿಮಾತು ಹೇಳಿದರು.

`ಬಾಗಿದ ತಲೆ, ಮುಗಿದ ಕೈ ಶರಣರ ಲಕ್ಷಣ' ಹೆಣ್ಣುಮಕ್ಕಳು ಜಾಗೃತರಾಗದ ಹೊರತು ಬಸವತತ್ವ ಬೆಳೆಯುವುದು ಕಷ್ಟ. ಎಲ್ಲ ಮಹಿಳೆಯರು ಮೊದಲು ಶಿಕ್ಷಣ ಪಡೆಯಬೇಕು. ನಂತರ ಸಮಾಜದ ನ್ಯೂನತೆ ತಿದ್ದಬೇಕು ಎಂದು ಬಸವಕಲ್ಯಾಣದ ಸಂಚಾಲಕ ಶರಣ ಸಿದ್ದರಾಮಣ್ಣ ಹೇಳಿದರು

ಕಮ್ಮಾರಗಟ್ಟೆ ನಿಂಗಪ್ಪ ಸ್ಮಾರಕ ಟ್ರಸ್ಟ್‌ನವರು ಬಡವರಿಗೆ ವಸ್ತ್ರದಾನ ಮಾಡಿದರು. ಎಚ್.ಬಿ. ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಡಾ.ಬಸವನಗೌಡ, ತೀರ್ಥಪ್ಪ, ಸಿದ್ದಪ್ಪ, ಹನುಮಂತಪ್ಪ ಹಾಗೂ ಗ್ರಾಮಸ್ಥರು ಇದ್ದರು. ಎನ್. ಆಂಜನೇಯ ಸ್ವಾಗತಿಸಿದರು. ಶಿಕ್ಷಕ ಶಿರಸಾಚಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.