ADVERTISEMENT

ಮರ ಕಡಿಯಲು ಜಿಲ್ಲಾಡಳಿತ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 11:20 IST
Last Updated 18 ಸೆಪ್ಟೆಂಬರ್ 2011, 11:20 IST
ಮರ ಕಡಿಯಲು ಜಿಲ್ಲಾಡಳಿತ ನಿರ್ಧಾರ
ಮರ ಕಡಿಯಲು ಜಿಲ್ಲಾಡಳಿತ ನಿರ್ಧಾರ   

ದಾವಣಗೆರೆ: ನಗರದ ಪುಣೆ-ಬೆಂಗಳೂರು (ಪಿಬಿ) ರಸ್ತೆಯ ಮರ-ಗಿಡಗಳನ್ನು ಕಡಿದು, ಸ್ಥಳ ಲಭ್ಯತೆ ಪರಿಗಣಿಸಿ, ಎಷ್ಟು ಅಡಿ ರಸ್ತೆ ವಿಸ್ತರಿಸಬೇಕು ಎಂದು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪಿಬಿ ರಸ್ತೆ ವಿಸ್ತರಣೆ ಕುರಿತ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಪಿಬಿ ರಸ್ತೆ ವಿಸ್ತರಣೆ ಕುರಿತ ಸಭೆಯಲ್ಲಿ ಸಾರ್ವಜನಿಕರು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಲಹೆಯಂತೆ ನಗರದ ಪಿಬಿ ರಸ್ತೆಯ ಮರ-ಗಿಡಗಳನ್ನು ಕಡಿಸಿ, ಸ್ಥಳದ ಲಭ್ಯತೆ ಪರಿಗಣಿಸಿ ಶೀಘ್ರದಲ್ಲೇ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣಶೆಟ್ಟಿ ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ರಾಜ್ಯದ ತುಮಕೂರು, ಹಿರಿಯೂರು, ಹಾವೇರಿ, ರಾಣೇಬೆನ್ನೂರು ಮತ್ತಿತರ ಕಡೆಗಳಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸಲಾಗಿದೆ.

ಈ ಭಾಗಗಳಲ್ಲಿ ರಸ್ತೆ ವಿಸ್ತರಣೆಗೆ ಬಳಸಿರುವ ಮಾನದಂಡಗಳನ್ನು ಅಧ್ಯಯನ ಮಾಡಿ, ನಗರದಲ್ಲಿ ಆವಶ್ಯಕತೆಗೆ ತಕ್ಕಂತೆ ಪಿಬಿ ರಸ್ತೆ ವಿಸ್ತರಣೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪಿಬಿ ರಸ್ತೆಯ ಅಕ್ಕಪಕ್ಕದ ಸ್ಥಳಗಳಲ್ಲಿ ನೀತಿ-ನಿಯಮಕ್ಕೆ ಅನುಸಾರವಾಗಿ ನಿವೇಶನ ಖರೀದಿಸಿ, ಅನೇಕರು ಕಟ್ಟಡ ಕಟ್ಟಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಗೆ ನಿಯಮಿತವಾಗಿ ಕಂದಾಯ ಇತರ  ಶುಲ್ಕ ಪಾವತಿಸಲಾಗಿದೆ. ರಸ್ತೆ ವಿಸ್ತರಣೆ ವೇಳೆ ಕಟ್ಟಡ ಮಾಲೀಕರಿಗೆ ಪೂರ್ವಮಾಹಿತಿ ಹಾಗೂ ಪರಿಹಾರ ನೀಡಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆಗೆ ನಿಗದಿಯಾದ ಮುಖ್ಯಮಂತ್ರಿ ವಿಶೇಷ ಅನುದಾನ ರೂ 100 ಕೋಟಿಯಲ್ಲಿ ರೂ 20ಕೋಟಿ ರಸ್ತೆ ಅಭಿವೃದ್ಧಿಗಾಗಿಯೇ ಮೀಸಲಿಡಲಾಗಿದೆ.

ಪಾಲಿಕೆಯ ವರದಿ ಪ್ರಕಾರ ಪಿಬಿ ರಸ್ತೆ ಇಕ್ಕೆಲಗಳಲ್ಲಿ 792 ಕಟ್ಟಡಗಳಿವೆ. ಬ್ರಿಟಿಷರ ಕಾಲದಲ್ಲಿ ನಡೆಸಲಾದ ರಸ್ತೆ ಸರ್ವೇ ಮಾಹಿತಿಯನ್ನೂ ಪರಿಗಣಿಸಿ, ಪಿಬಿ ರಸ್ತೆ ವಿಸ್ತರಿಸಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ನಗರದ ಇಂದಿನ ಜನಸಂಖ್ಯೆ, ವಾಹನ ದಟ್ಟಣೆ ಆಧಾರದಲ್ಲಿ ರಸ್ತೆ ವಿಸ್ತರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಪಾಲಿಕೆ ಮೇಯರ್ ಎಂ.ಎಸ್. ವಿಠ್ಠಲ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.