ದಾವಣಗೆರೆ: ಮಾಜಿ ಶಾಸಕ ಮಹಿಮ ಪಟೇಲ್ ಬೆಂಗಳೂರಿನಲ್ಲಿ ಶುಕ್ರವಾರ ಕಾಂಗ್ರೆಸ್ ತೊರೆದು ಅಧಿಕೃತವಾಗಿ ಜೆಡಿಎಸ್ ಸೇರಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿ ಮಾರ್ಚ್ 24ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲರ ಪುತ್ರ ಮಹಿಮ, 2004ರಲ್ಲಿ ಅದೇ ಪಕ್ಷದಿಂದ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಪಕ್ಷದಲ್ಲಿನ ಮನಸ್ತಾಪದಿಂದ ಸ್ವರ್ಣಯುಗ ಪಕ್ಷ ಸ್ಥಾಪಿಸಿದ್ದ ಅವರು, ನಂತರ 2009ರಲ್ಲಿ ಕಾಂಗ್ರೆಸ್ ಸೇರಿದ್ದರು. 2013ರಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ದೊರೆಯದ ಕಾರಣ ತೀವ್ರ ಬೇಸರಗೊಂಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್
ಬಯಸಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮತ್ತೆ ಶಾಮನೂರು ಕುಟುಂಬಕ್ಕೆ ಮಣೆ ಹಾಕಿದ ಕಾರಣ ಮನನೊಂದು ಪಕ್ಷ ತ್ಯಜಿಸಿದ್ದರು.
ಇದೀಗ ಮಾತೃ ಪಕ್ಷಕ್ಕೆ ಮರಳಿದ್ದು, ಜೆಡಿಎಸ್‌ನಿಂದ ಸ್ಪರ್ಧೆಗೆ ಇಳಿಯುವುದು ಖಚಿತವಾದ ಕಾರಣ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
ಮಹಿಮ ಬಹುಸಂಖ್ಯಾತ ಪಂಚಮಸಾಲಿ ಸಮಾಜಕ್ಕೆ ಸೇರಿದವರಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಸಾದು ವೀರಶೈವ
ಸಮಾಜಕ್ಕೆ ಸೇರಿದ್ದಾರೆ. ಮೂವರೂ ಪ್ರಬಲ ಅಭ್ಯರ್ಥಿಗಳಾಗಿದ್ದು, ಚುನಾವಣಾ ಕಣ ಇನ್ನಷ್ಟು ರಂಗೇರುತ್ತದೆ ಎಂಬುದು ಜಿಲ್ಲೆಯ ಜನರ ಲೆಕ್ಕಾಚಾರ.
ಟಿಕೆಟ್ ಆಕಾಂಕ್ಷಿಗಳಾಗಿದ್ದ ಸೈಯದ್‌ಸೈಫುಲ್ಲಾ ಹಾಗೂ ಶಾಸಕ ಎಚ್.ಎಸ್.ಶಿವಶಂಕರ್ ಇಬ್ಬರೂ ಮಹಿಮ ಸ್ಪರ್ಧೆಗೆ ಒಪ್ಪಿಗೆ ನೀಡಿದ್ದು, ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.