ADVERTISEMENT

ಮಾದರಿ ತಾಲ್ಲೂಕು ಮಾಡಿ; 3 ವರ್ಷ ಇಲ್ಲೇ ಇರಿ!

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 11:10 IST
Last Updated 7 ಸೆಪ್ಟೆಂಬರ್ 2011, 11:10 IST

ದಾವಣಗೆರೆ: ಅಧಿಕಾರಿಗಳು ದಾವಣಗೆರೆಯನ್ನು ರಾಜ್ಯದಲ್ಲಿ ಮಾದರಿ ತಾಲ್ಲೂಕು ಮಾಡಬೇಕು. ಅದಕ್ಕಾಗಿ ಶ್ರಮಿಸಿ, ನೀವು ಒಳ್ಳೆಯ ಕೆಲಸ ಮಾಡಿದರೆ ನಿಮ್ಮನ್ನು ಇನ್ನೂ ಮೂರು ವರ್ಷ ಇಲ್ಲಿಂದ ವರ್ಗಾವಣೆ ಮಾಡಿಸುವುದಿಲ್ಲ. ನಮ್ಮ ಸರ್ಕಾರ ಬಿದ್ದರೂ, ಮುಂದಿನ ಶಾಸಕ ನಾನೇ. ಕ್ಷೇತ್ರದ ಜನರ ಆರ್ಶೀವಾದ ನನಗಿದೆ...

ಇದು ತಾಲ್ಲೂಕು ಪಂಚಾಯ್ತಿ ಸಭಾಂಗಣಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಯಕೊಂಡ ಶಾಸಕ ಹಾಗೂ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜ ನಾಯ್ಕ ಅಧಿಕಾರಿಗಳಿಗೆ ನೀಡಿದ ಆಶ್ವಾಸನೆ.

ಪ್ರತಿ ಇಲಾಖೆಯ ಮಾಹಿತಿ ವಿವರವಾಗಿ ಪಡೆದ ಶಾಸಕರು, ತಮ್ಮ ಕ್ಷೇತ್ರಕ್ಕೆ ಆಗುವ ಅನುಕೂಲ-ಅನನುಕೂಲ ಲೆಕ್ಕಹಾಕಿ, ತಾಲ್ಲೂಕಿನಲ್ಲಿ ಯಾವುದೇ ಯೋಜನೆ ಅನುಷ್ಠಾನಗೊಳಿಸುವ ಮುನ್ನ ತಮ್ಮ ಜತೆ ಚರ್ಚಿಸಬೇಕು. ಪ್ರೌಢಶಾಲೆಗಳಲ್ಲಿ ಗೌರವ ಶಿಕ್ಷಕರ ನೇಮಕ, ಅಂಗನವಾಡಿ ಶಿಕ್ಷಕಿಯರ ನೇಮಕ ಸೇರಿದಂತೆ ಯೋಜನೆಗಳ ಅನುಷ್ಠಾನಕ್ಕೆ ಮುನ್ನ ತಮ್ಮ ಬಳಿ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತೋಟಗಾರಿಕಾ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ವಿತರಿಸುವ ಸಾಮಗ್ರಿಗಳನ್ನು ಪಡೆಯುವ ಫಲಾನುಭವಿಗಳು ಪುನರಾವರ್ತನೆ ಆಗುತ್ತಿದ್ದಾರೆ. ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಬೇಕು. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರತಿಭಾ ಮಲ್ಲಿಕಾರ್ಜುನ್ ತಾಕೀತು ಮಾಡಿದರು.

ತಾಲ್ಲೂಕಿನ ಕೆಲ ಶಾಲೆಗಳಿಗೆ ಬೈಸಿಕಲ್ ವಿತರಿಸದಿರುವ ಬಗ್ಗೆ ಪ್ರತಿಭಾ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ, ಎರಡು ಶಾಲೆಗಳಲ್ಲಿ ಮಾತ್ರ ವಿತರಿಸಲಿಲ್ಲ. ಎರಡು ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕಿನಲ್ಲಿ ಈ ಬಾರಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಬೆಳೆ ಸಮೃದ್ಧವಾಗಿದೆ. ತಾಲ್ಲೂಕಿನಲ್ಲಿ ಭೂಚೇತನ ಯೋಜನೆ ಯಶಸ್ವಿಯಾಗಿದೆ. ರಸಗೊಬ್ಬರದ ಕೊರತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ರಾಜಶೇಖರಪ್ಪ ಮಾಹಿತಿ ನೀಡಿದರು.

ಸರ್ಕಾರಕ್ಕೆ ಪ್ರಸ್ತಾವ

ತಾಲ್ಲೂಕಿನಲ್ಲಿ 5 ಖಾಸಗಿ ಹಾಸ್ಟೆಲ್‌ಗಳು ಮುಚ್ಚಿದ್ದು, ಇದರಿಂದ ಹಾಸ್ಟೆಲ್ ಕೊರತೆ ಇದೆ. 500 ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅನುಮತಿ ನೀಡಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅದಕ್ಕೆ ಶಾಸಕರು ಸಹಕಾರ ನೀಡಿ ಅನುಮತಿ ದೊರಕಿಸಬೇಕು ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಂದ್ರಪ್ಪ ಕೋರಿದರು.

ಸಿಡಿಪಿಒ ರಾಜಾನಾಯ್ಕ ಮಾತನಾಡಿ, ತಾಲ್ಲೂಕಿನಲ್ಲಿ 480 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ 267 ಕೇಂದ್ರಗಳಿಗೆ ಸ್ವಂತ ಕಟ್ಟಡವಿದ್ದು, ಉಳಿದ ಕೇಂದ್ರಗಳಿಗೆ ಕಟ್ಟಡದ ಆವಶ್ಯಕತೆ ಇದೆ ಎಂದರು.

ತಾಲ್ಲೂಕಿನ 7 ಗ್ರಾಮಗಳಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಶೇ. 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆರು ಆಸ್ಪತ್ರೆಗಳು ತಲಾ ಒಂದು ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಂಡಿವೆ. 15 ಕೆರೆಗಳಲ್ಲಿ 9 ಕೆರೆಗಳನ್ನು ್ಙ 2.2 ಕೋಟಿ ವೆಚ್ಚದಲ್ಲಿ ಹಾಗೂ ಕೊಡಗನೂರು ಸೇರಿದಂತೆ ಉಳಿದ ಕೆರೆಗಳನ್ನು ್ಙ 6 ಕೋಟಿ ವೆಚ್ಚದಲ್ಲಿ  ಪುನಶ್ಚೇತನ ಗೊಳಿಸಲಾಗುತ್ತಿದೆ ಎಂದು ಎಇಇ ಶಿವಕುಮಾರ್ ಮಾಹಿತಿ ನೀಡಿದರು.

ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ತಾ.ಪಂ. ಇಒ ಎಲ್.ಎಸ್. ಪ್ರಭುದೇವ್, ಉಪಾಧ್ಯಕ್ಷ ಶಿವರುದ್ರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಗೌಡ ಇತರರು ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.