ADVERTISEMENT

ಮಾಧ್ಯಮಕ್ಕೆ ಕುತ್ತು ತಂದ ನವ ಸಾಮ್ರಾಜ್ಯಶಾಹಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 6:25 IST
Last Updated 12 ಮಾರ್ಚ್ 2012, 6:25 IST

ದಾವಣಗೆರೆ: ನವ ಸಾಮ್ರಾಜ್ಯಶಾಹಿ ವ್ಯವಸ್ಥೆ ಇಂದು ಮಾಧ್ಯಮ ಕ್ಷೇತ್ರವನ್ನು ಧ್ವಂಸಗೊಳಿಸುತ್ತಿದೆ ಎಂದು ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಸಮಾಚಾರ ಪತ್ರಿಕಾ ಬಳಗ ನೀಡುವ 2011ರ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ನಗರದ ಉದ್ಯಮಿ ಜಯಪ್ರಕಾಶ್ ಯು. ಅಂಬರ್‌ಕರ್ ಅವರಿಗೆ ವಿತರಿಸಿ ಅವರು ಮಾತನಾಡಿದರು.

ಎಲೆಕ್ಟ್ರಾನಿಕ್ ಮಾಧ್ಯಮಗಳು ಒಂದೇ ಸುದ್ದಿಯನ್ನು ನಿರಂತರವಾಗಿ ಬಿತ್ತರಿಸುತ್ತಾ ಸುದ್ದಿಯ ಬಗೆಗಿನ ಕುತೂಹಲವನ್ನೇ ಹಾಳು ಮಾಡುತ್ತಿವೆ. ಮುದ್ರಣ ಮಾಧ್ಯಮಗಳಿಗೆ ಹೊಸ, ಕುತೂಹಲದ ಸುದ್ದಿಗಳೇ ಇಲ್ಲದಂತೆ ಮಾಡುತ್ತಿವೆ. ಇನ್ನೂ ರಾಜ್ಯಮಟ್ಟದ ಪತ್ರಿಕೆಗಳು ಜಿಲ್ಲೆಗೊಂದರಂತೆ ಆವೃತ್ತಿ ಮಾಡುತ್ತಾ ಸಣ್ಣ ಪತ್ರಿಕೆಗಳನ್ನು ವಿನಾಶದ ಅಂಚಿಗೆ ತಳ್ಳುತ್ತಿವೆ ಎಂದು ದೂರಿದರು.

ವಕೀಲರು ಹಾಗೂ ಮಾಧ್ಯಮದ ನಡುವಿನ ಘರ್ಷಣೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಇಂತಹ ಸಂಘರ್ಷದಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಸಂಘರ್ಷ ಕೊನೆಗೊಳಿಸಲು ಮುಖಂಡರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಕೋರಿದರು.

ಜೀವನವಿಡೀ ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ವಿದೇಶಗಳಲ್ಲಿ ಇಟ್ಟು ಕೊಳೆಸುತ್ತಾರೆ. ಅದನ್ನೇ ಸಮಾಜದ ಅಭಿವೃದ್ಧಿಗೆ ಬಳಸಿದರೆ ದೇಶ ಉದ್ಧಾರವಾಗುತ್ತದೆ. ಇಂದು ಜಾತಿಯ ಮಠಗಳು ಮಿನಿ ಸ್ವಿಸ್ ಬ್ಯಾಂಕ್‌ಗಳಾಗಿದ್ದು, ಕೋಟ್ಯಂತರ ಹಣ ಕೊಳೆಯುತ್ತಿದೆ ಎಂದು ಆರೋಪಿಸಿದರು.

ಸರ್ಕಾರಿ ನೌಕರಿ ಮೂಲಕವೂ ಸಮಾಜ ಸೇವೆ ಸಲ್ಲಿಸಬಹುದು. ಒಳ್ಳೆಯ ವ್ಯಕ್ತಿಗಳೆಲ್ಲ ಸರ್ಕಾರಿ ನೌಕರಿ ತಿರಸ್ಕರಿಸಿದರೆ ಅಲ್ಲಿ ಅಯೋಗ್ಯರು ಕೂರುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.

ಆರ್.ಎಸ್. ನಾಗಭೂಷಣ್ ಮಾತನಾಡಿ, ಸತತ ಪರಿಶ್ರಮದಿಂದ ಯಶಸ್ಸು ದೊರೆಯುತ್ತದೆ. ಅದಕ್ಕೆ ತಾಳ್ಮೆ ಮುಖ್ಯ. ಒಮ್ಮಮ್ಮೆ ಸಂಖ್ಯೆಗಳು ಮನುಷ್ಯನ ಯಶಸ್ವಿನಲ್ಲಿ ಪಾತ್ರ ವಹಿಸುತ್ತವೆ. ಭದ್ರತೆ ಹಾಗೂ ಪಿಂಚಣಿಗಾಗಿ ಇಂದು ಯುವ ಜನತೆ ಸರ್ಕಾರಿ ಉದ್ಯೋಗದ ವ್ಯಾಮೋಹಕ್ಕೆ ಬಲಿಯಾಗದೇ ಸ್ವಯಂ ಉದ್ಯೋಗದತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಜಯಪ್ರಕಾಶ್ ಯು. ಅಂಬರ್‌ಕರ್ ಮಾತನಾಡಿ, ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ದೊರೆಯುತ್ತದೆ. ಯಶಸ್ಸು ಪಡೆದ ವ್ಯಕ್ತಿ ಸಮಾಜದ ಅಭಿವೃದ್ಧಿಗೂ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.

ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎನ್.ಟಿ. ಯರ‌್ರಿಸ್ವಾಮಿ, ಸಂಪಾದಕ ವಿ. ಹನುಮಂತಪ್ಪ, ಸಿ.ಕೆ. ಆನಂದ ತೀರ್ಥಾಚಾರ್, ಸಂಧ್ಯಾ ಸುರೇಶ್, ಸಾಲಿಗ್ರಾಮ ಗಣೇಶ್ ಶೆಣೈ, ಎಂ.ಟಿ. ಶರಣಪ್ಪ ಉಪಸ್ಥಿತರಿದ್ದರು. ಕಾನೂನು ತಜ್ಞ ಎಸ್.ಎಚ್. ಪಟೇಲ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.