ADVERTISEMENT

ಮಾರುಕಟ್ಟೆ ಸೌಲಭ್ಯಕ್ಕೆ ರೈತರ ಒತ್ತಾಯ

ಎರಡು ಸಾವಿರ ಎಕರೆ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಕೃಷಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 9:33 IST
Last Updated 15 ಜುಲೈ 2013, 9:33 IST

ಚನ್ನಗಿರಿ:  ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಹಸಿ ಮೆಣಸಿನಕಾಯಿ ಕೃಷಿಯಲ್ಲಿ ತೊಡಗಿ ದ್ದಾರೆ. ಒಟ್ಟಾರೆ ತಾಲ್ಲೂಕಿನಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶಕ್ಕಿಂತಲೂ ಹೆಚ್ಚು ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಕೃಷಿ ಮಾಡಿದರೆ, ದೇವರಹಳ್ಳಿ ಗ್ರಾಮವೊಂದರಲ್ಲಿಯೇ 1.5 ಸಾವಿರ ಎಕರೆ ಪ್ರದೇಶದಲ್ಲಿ ಈ ಕೃಷಿಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ.

ಅಸ್ತಾಫನಹಳ್ಳಿ, ಗುಳ್ಳೇಹಳ್ಳಿ, ಚಿಕ್ಕ ದೇವರಹಳ್ಳಿ, ವಿ. ರಾಮೇನಹಳ್ಳಿ, ಹಿರೇಉಡ, ಕೆ. ರಾಮಗೊಂಡನಹಳ್ಳಿ, ಹಟ್ಟಿ, ಬುಳುಸಾಗರ, ಮಂಟರಘಟ್ಟ, ನಲ್ಲೂರು, ಗಾಳಿಹಳ್ಳಿ, ನಾಗೇನಹಳ್ಳಿ, ನೀತಿಗೆರೆ, ಕೊರಟಿಕೆರೆ, ಶೆಟ್ಟಿಹಳ್ಳಿ, ಚಿಕ್ಕಗಂಗೂರು, ಹಿರೇ ಗಂಗೂರು, ಕಾಕನೂರು ಮುಂತಾದ ಗ್ರಾಮಗಳಲ್ಲಿ ವ್ಯಾಪಕವಾಗಿ ಹಸಿ ಮೆಣಸಿನಕಾಯಿ ಕೃಷಿಯನ್ನು ಮಾಡಲಾಗಿದೆ. ಇದರಲ್ಲಿ ದೇವರಹಳ್ಳಿ ಗ್ರಾಮ ಈ ಕೃಷಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಸುಮಾರು ಹತ್ತು ವರ್ಷಗಳಿಂದ ನಿರಂತರವಾಗಿ ಈ ಗ್ರಾಮದ ರೈತರು ಹಸಿ ಮೆಣಸಿನಕಾಯಿ ಕೃಷಿಯಲ್ಲಿ ತೊಡಗಿದ್ದಾರೆ.

ಅಲ್ಲದೇ ಹಸಿ ಮೆಣಸಿನಕಾಯಿ ಜತೆಗೆ ವಿವಿಧ ಜಾತಿಯ ಸೊಪ್ಪು, ಮೂಲಂಗಿ, ಹಿರೇಕಾಯಿ, ಕೋಸು, ಕ್ಯಾರೆಟ್, ಸೀಮೆ ಬದನೆ, ಬದನೆಕಾಯಿ, ಟೊಮೆಟೋ ಮುಂತಾದ ತರಕಾರಿಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದು ವಿಶೇಷವಾಗಿದೆ. 

ಒಂದು ತಿಂಗಳಲ್ಲಿ ಹಸಿ ಮೆಣಸಿನಕಾಯಿ ಗಿಡಗಳು ಫಸಲು ಕೊಡಲು ಆರಂಭಿಸುತ್ತವೆ. ಫಸಲು ಬಂದ ನಂತರ ದೇವರಹಳ್ಳಿ ಗ್ರಾಮದಲ್ಲಿ ಪ್ರತಿದಿನ ಕನಿಷ್ಠ ಎಂದರೂ 10ರಿಂದ 15 ಲೋಡ್‌ನಷ್ಟು ಹಸಿ ಮೆಣಸಿನಕಾಯಿ ನೆರೆಯ ಶಿವಮೊಗ್ಗ, ಚಿತ್ರದುರ್ಗ, ಮಂಗಳೂರು, ಉಡುಪಿ ಜಿಲ್ಲೆಗಳಿಗೆ ರವಾನೆಯಾಗುತ್ತದೆ.

ಹಸಿ ಮೆಣಸಿನಕಾಯಿಗೆ ಬೇಡಿಕೆ ಇದ್ದಾಗ ಮಾತ್ರ ಖರೀದಿದಾರರು ಇಲ್ಲಿಗೆ ಬರುತ್ತಾರೆ. ಬೇಡಿಕೆ ಕಡಿಮೆಯಾಗಿ ದರವೂ ಕಡಿಮೆಯಿದ್ದರೆ ಯಾವ ಖರೀದಿದಾರರು ಇಲ್ಲಿಗೆ ಬರುವುದಿಲ್ಲ. ಇದರಿಂದ ಸಾರಿಗೆ ವೆಚ್ಚ ಅಧಿಕವಾಗಿ ತುಂಬಾ ಕಡಿಮೆ ಲಾಭ ಸಿಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹಸಿ ಮೆಣಸಿನಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುವ ಗ್ರಾಮವಾದ ದೇವರಹಳ್ಳಿ ಗ್ರಾಮದಲ್ಲಿ ರೈತರಿಗೆ ಅನುಕೂಲವಾಗುವಂತೆ ಮಾರುಕಟ್ಟೆಯನ್ನು ಕಲ್ಪಿಸಿ ಕೊಟ್ಟರೆ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎನ್ನುತ್ತಾರೆ ಗ್ರಾಮದ ಕೃಷಿಕರಾದ ಶಿವಣ್ಣ, ಸಿದ್ದಪ್ಪ.

ಇಂದು ತುರ್ತು ಸಭೆ
ನ್ಯಾಮತಿ: ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಅಧ್ಯಕ್ಷ ಜೆ. ರಾಜು ಅವರ ಅಧ್ಯಕ್ಷತೆಯಲ್ಲಿ  ಜುಲೈ 15ರಂದು ಬೆಳಿಗ್ಗೆ 11ಕ್ಕೆ ಸರ್ವ ಸದಸ್ಯರ ತುರ್ತುಸಭೆ ನಡೆಯಲಿದೆ.

2013-14ನೇ ಸಾಲಿಗೆ ಸಂತೆಸುಂಕ, ಬಸ್‌ಸ್ಟಾಂಡ್ ಸುಂಕ, ಆಟೋ ನಿಲ್ದಾಣ ಸುಂಕ ಮತ್ತು ಮಾಂಸದ ಅಂಗಡಿಗಳ ಬಹಿರಂಗ ಹರಾಜು ದಿನಾಂಕ ನಿಗದಿಪಡಿಸುವುದು, ಜೂನ್ 2013ರ ಜಮಾ-ಖರ್ಚುಗಳ ಬಗ್ಗೆ ಚರ್ಚಿ ನಡೆಯಲಿದೆ ಎಂದು ಸದಸ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.