ADVERTISEMENT

ಮಾರ್ಚ್‌ನಲ್ಲಿ ರೈತರ ಬೃಹತ್ ಸಮಾವೇಶ: ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 10:15 IST
Last Updated 9 ಜನವರಿ 2012, 10:15 IST

ದಾವಣಗೆರೆ: ನಗರದಲ್ಲಿ ಮಾರ್ಚ್ ಅಂತ್ಯದ ವೇಳೆಗೆ ರೈತರ ಬೃಹತ್ ಸಮಾವೇಶ ನಡೆಸಿ, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರ ಹಾಗೂ ಕೃಷಿಕರನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಬೆಳೆ ವೈಫಲ್ಯ, ಸಾಲಬಾಧೆ ಸೇರಿದಂತೆ ಹಲವು ಕಾರಣಗಳಿಂದ ದೇಶದಲ್ಲಿ 7 ಲಕ್ಷ, ರಾಜ್ಯದಲ್ಲಿ 50 ಸಾವಿರ ರೈತರು ಮೃತಪಟ್ಟಿದ್ದಾರೆ. ಆದರೆ, ಸರ್ಕಾರ ರೈತರ ಸಮಸ್ಯೆ ಪರಿಹಾರಕ್ಕೆ ಯಾವುದೇ ರಚನಾತ್ಮಕ ಕಾರ್ಯಕ್ರಮ ಹಾಕಿಕೊಂಡಿಲ್ಲ. ವೈಜ್ಞಾನಿಕ ಬೆಲೆ ನಿಗದಿ ಮಾಡಿಲ್ಲ. ಸರ್ಕಾರಿ ನೌಕರರಿಗೆ ವೇತನ ಆಯೋಗ ರಚಿಸುವ ಸರ್ಕಾರಗಳು, ಅದೇ ರೀತಿ ರೈತರು ಹಾಗೂ ಕೂಲಿ ಕಾರ್ಮಿಕರಿಗೂ ಆಯೋಗ ರಚಿಸಲಿ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಒಂದೆಡೆ ಬೆಂಬಲ ಬೆಲೆ ನೀಡುವ ಸರ್ಕಾರ ಇನ್ನೊಂದೆಡೆ ಖರೀದಿಗೆ ಹತ್ತುಹಲವು ನಿಯಮಗಳನ್ನು ವಿಧಿಸುತ್ತದೆ. ರೈತರಿಗೆ ಕೃಷಿ ವೆಚ್ಚ ಆಧಾರಿತ ವೈಜ್ಞಾನಿಕ ಬೆಲೆ ನೀಡಲು ಮೀನ-ಮೇಷ ಎಣಿಸುತ್ತಿದೆ. ನಾಲ್ಕಾರು ಜನ ನಕ್ಸಲರ ಸಮಸ್ಯೆ ಕುರಿತು ಮುಕ್ತ ಮನಸ್ಸಿನಿಂದ ಮಾತನಾಡುವ ಸರ್ಕಾರ, ಸಾವಿರಾರು ರೈತರು ದೆಹಲಿಗೆ ಹೋದರೂ ಮಾತನಾಡುವ ಸೌಜನ್ಯ ತೋರುವುದಿಲ್ಲ. 4ಲಕ್ಷ ಕೋಟಿ ಕೃಷಿ ಬಂಡವಾಳ ಹರಿದು ಬರುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಆದರೆ, ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಪಂಪ್‌ಸೆಟ್‌ಗಾಗಿಯೇ 2 ಲಕ್ಷ ಕೋಟಿ ವ್ಯಯಿಸಿರುವುದನ್ನು ಬಂಡವಾಳ ಎಂದು ಏಕೆ ಪರಿಗಣಿಸುವುದಿಲ್ಲ? ರೈತರು ಸ್ವಂತ ಹಣದಿಂದ 55 ಲಕ್ಷ ಹೆಕ್ಟೇರ್ ನೀರಾವರಿ ಮಾಡಿದ್ದಾರೆ. ಅದು ಬಂಡವಾಳ ಅಲ್ಲವೇ ಎಂದು ಪ್ರಶ್ನಿಸಿದರು.

ಕೃಷಿ ಕ್ಷೇತ್ರಕ್ಕೆ ಕೈಗಾರಿಕಾ ಕ್ಷೇತ್ರದ ಸ್ಥಾನಮಾನ ನೀಡಬೇಕು. ತಾಲ್ಲೂಕು ಕಚೇರಿಗಳಿಗೆ ಅನಗತ್ಯವಾಗಿ ರೈತರು ಅಲೆಯುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ರೈತ ಮುಖಂಡರಾದ ಅರುಣ್‌ಕುಮಾರ್ ಕುರುಡಿ, ಕೊಗ್ಗನೂರು ಹನುಮಂತಪ್ಪ, ಬುಳ್ಳಾಪುರ ಹನುಮಂತಪ್ಪ, ಬಲ್ಲೂರು ರವಿಕುಮಾರ್, ಸುಣಿಗೆರೆ ಪರಮೇಶ್ವರಪ್ಪ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.

ಕೋಡಿಹಳ್ಳಿ ನಡೆಗೆ ಅಸಮಾಧಾನ

ದಾವಣಗೆರೆ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಲ್ಲಿ ಯಾವುದೇ ಒಡಕಿಲ್ಲ. ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನಡೆಯಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸವಾಗಿದೆ. ಅವರು ತಾವೇ ರಾಜ್ಯ ಘಟಕದ ಅಧ್ಯಕ್ಷ ಎಂದು ಹೇಳಿಕೊಂಡು ಹೋಗುತ್ತಿರುವುದು ಸಮಿತಿಯ ನಿರ್ಧಾರಕ್ಕೆ ವಿರುದ್ಧ ವಾಗಿದೆ ಎಂದು ಕೆ.ಎಸ್. ಪುಟ್ಟಣ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲೂ ಅನೇಕ ರೈತ ಸಂಘಗಳು ಇವೆಯಲ್ಲ ಎಂಬ ಪ್ರಶ್ನೆಗೆ, ನಮ್ಮದೇ ಅಧಿಕೃತ ಸಂಘ. ಸಂಘದ ಹೆಸರು ದುರ್ಬಳಕೆ ಬಗ್ಗೆ ಕೋರ್ ಕಮಿಟಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದೆ. ಜಿಲ್ಲೆಯಲ್ಲಿ ಹೊನ್ನೂರು ಮುನಿಯಪ್ಪ ನಮ್ಮ ಸಂಘಟನೆಯ ಜಿಲ್ಲಾ ಅಧ್ಯಕ್ಷರು. ಹುಚ್ಚವ್ವನಹಳ್ಳಿ ಮಂಜುನಾಥ್‌ಗೂ ರಾಜ್ಯ ರೈತ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ. ಅವರು ಜಿಲ್ಲೆಯ ಜೆಡಿಎಸ್ ಮುಖಂಡರು ಅಷ್ಟೇ ಎಂದು ಪ್ರತಿಕ್ರಿಯಿಸಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.