ADVERTISEMENT

ಮಾವು ಆವಕ ಹೆಚ್ಚಳ; ಬೆಲೆ ಕುಸಿತ

ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್‌ ಮಾವಿನ ಸಮೃದ್ಧ ಬೆಳೆ

​ಪ್ರಜಾವಾಣಿ ವಾರ್ತೆ
Published 8 ಮೇ 2014, 9:58 IST
Last Updated 8 ಮೇ 2014, 9:58 IST
ಸಂತೇಬೆನ್ನೂರಿನ ಸಾಸಲು ರಸ್ತೆಯ ಮಾವಿನ ಮಂಡಿಯಲ್ಲಿ ಆಲ್ಫೋನ್ಸೊ ಮಾವನ್ನು ಹೊರ ರಾಜ್ಯಗಳಿಗೆ ರವಾನಿಸಲು ಲಾರಿಗೆ ತುಂಬುತ್ತಿರುವ ದೃಶ್ಯ.
ಸಂತೇಬೆನ್ನೂರಿನ ಸಾಸಲು ರಸ್ತೆಯ ಮಾವಿನ ಮಂಡಿಯಲ್ಲಿ ಆಲ್ಫೋನ್ಸೊ ಮಾವನ್ನು ಹೊರ ರಾಜ್ಯಗಳಿಗೆ ರವಾನಿಸಲು ಲಾರಿಗೆ ತುಂಬುತ್ತಿರುವ ದೃಶ್ಯ.   

ಸಂತೇಬೆನ್ನೂರು: ಜಿಲ್ಲೆಯ ಮುಕ್ಕಾಲು ಪಾಲು ಮಾವು ಬೆಳೆಗೆ ಪ್ರಸಿದ್ಧಿ ಪಡೆದ ಹೋಬಳಿಯಾದ್ಯಂತ ಅಲ್ಫೋನ್ಸೊ (ಬಾದಾಮ್‌) ಮಾವು ತಳಿಗೆ ಯುರೋಪ್‌ ಒಕ್ಕೂಟದ ನಿಷೇಧ ಯಾವುದೇ ಪರಿಣಾಮ ಬೀರಿಲ್ಲ. ಜಿಲ್ಲೆಯ 4 ಸಾವಿರ ಹೆಕ್ಟೇರ್‌ ಮಾವು ಬೆಳೆಯಲಾಗುತ್ತಿದೆ. ಅದರಲ್ಲಿ 2 ಸಾವಿರ ಹೆಕ್ಟೇರ್‌ ಸಂತೇಬೆನ್ನೂರು ಹೋಬಳಿಯಲ್ಲಿವೆ. ಅದರಲ್ಲಿ ಉತ್ಕೃಷ್ಟ ತಳಿ ಅಲ್ಫೋನ್ಸೊ ಮಾವು ಸಮೃದ್ಧವಾಗಿ ಬೆಳೆಯಲಾಗುತ್ತದೆ.

ಏಪ್ರಿಲ್‌ ತಿಂಗಳ ಆರಂಭದಲ್ಲಿ ಸಗಟು ಮಾರಾಟದಲ್ಲಿ 1 ಕಿ.ಗ್ರಾಂಗೆ ₨ 70ರ ಆಸುಪಾಸಿನಲ್ಲಿತ್ತು. ಆಗಷ್ಟೆ ಆರಂಭವಾದ ಇಳುವರಿಯಿಂದ ಗೇಣಿದಾರರಿಗೆ ಉತ್ತಮ ಬೆಲೆ ಸಿಕ್ಕಿತ್ತು. ಮೇ ತಿಂಗಳಲ್ಲಿ ಒಮ್ಮೆಲೆ ಭರ್ಜರಿ ಮಾವು ಮಂಡಿಗಳಿಗೆ ಆವಕವಾದ ಕಾರಣ ಬೆಲೆ ಕುಸಿದಿದೆ. ಸದ್ಯ ಪ್ರತಿ ಕಿ.ಗ್ರಾಂಗೆ ₨ 20 ಮಾತ್ರನಿಗದಿಯಾಗಿದೆ.

ಈ ಬಾರಿ ಬಾದಾಮ್‌ ಮಾವು ತಡವಾಗಿ ಹಣ್ಣಿಗೆ ಬಂದ ಕಾರಣ ಬೆಲೆ ಕುಸಿದಿದೆ ಎನ್ನುತ್ತಾರೆ ಎಸ್‌ಕೆಎಚ್‌ ಅಂಗಡಿ ಮಾಲೀಕ ಎಸ್‌.ಕೆ.ಜಾಕೀರ್‌. ಹೊರ ರಾಜ್ಯಗಳಿಗೆ ರವಾನೆ ಇಲ್ಲಿನ ವಿವಿಧ ಮಂಡಿಗಳಲ್ಲಿ ನಿತ್ಯ 30ರಿಂದ 40 ಸಾವಿರ ಕಿಲೋ ಗ್ರಾಮ ಆಲ್ಫೋನ್ಸೊ ಮಾವು ಬೇರೆ ಬೇರೆ ರಾಜ್ಯಗಳಿಗೆ ರವಾನಿಸಲಾಗುತ್ತದೆ. ತೋಟಗಳಿಂದ ಹಣ್ಣುಗಳನ್ನು ತಂದು ರಾಶಿ ಹಾಕಲಾಗುತ್ತದೆ.

ಗುಣಮಟ್ಟದ ಹಣ್ಣುಗಳನ್ನು ಆಯ್ದು ಲಾರಿಗಳಿಗೆ ತುಂಬಿಸಲಾಗುತ್ತದೆ. 15ರಿಂದ 20 ಲಾರಿಗಳು ನಿತ್ಯ ರವಾನಿಸಲಾಗುತ್ತಿದೆ. ಮೇ ತಿಂಗಳ ಕೊನೆವರೆಗೆ ಆಲ್ಫನ್ಸೊ ತಳಿಯ ಹಣ್ಣುಗಳು ಲಭ್ಯವಾಗುತ್ತವೆ. ಇಲ್ಲಿಂದ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳ ವಿವಿಧ ನಗರಗಳಿಗೆ ನೇರವಾಗಿ ರವಾನಿಸಲಾಗುತ್ತಿದೆ ಎನ್ನುತ್ತಾರೆ ಅಬಿದ್‌ ಅಲಿ. 

ಲಾಭಾಂಶದಲ್ಲಿ ಇಳಿಕೆ ಮೇ ತಿಂಗಳಲ್ಲಿ ಒಮ್ಮೆಲೆ ಮಾರುಕಟ್ಟೆಗೆ ಬರುವ ಹಣ್ಣುಗಳ ರಾಶಿಯಿಂದ ಬೆಲೆ ಕುಸಿತದಿಂದ ಲಾಭಾಂಶದಲ್ಲಿ ಇಳಿಕೆ ಕಂಡಿದೆ. ಹಣ್ಣು ಕೀಳಲು ಒಬ್ಬ ವ್ಯಕ್ತಿ ದಿನವೊಂದಕ್ಕೆ ₨ 400 ನೀಡಬೇಕು. ಔಷಧಿ ಸಿಂಪಡಿಸಲು ಸಾವಿರಾರು ರೂಪಾಯಿ ಖರ್ಚಾಗುತ್ತದೆ.

ತೋಟ ಕಾಯಲು ನೀಡುವ ಸಂಬಳ. ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಸರಬರಾಜು ಮಾಡುವ ಬಾಡಿಗೆ ಹೆಚ್ಚಳದಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ ಎನ್ನುತ್ತಾರೆ ಲಿಯಾಕತ್‌ ಅಲಿ.

ಶೀತಲೀಕರಣ ಘಟಕಕ್ಕೆ ಬೇಡಿಕೆ

ವರ್ಷಕ್ಕೆ 3ರಿಂದ 4 ಸಾವಿರ ಟನ್‌ ಮಾವು ಬೆಳೆಯುವ ಸಂತೇಬೆನ್ನೂರಿನಲ್ಲಿ ಶೀತಲಿಕರಣ ಘಟಕದ ಅಗತ್ಯವಿದೆ. ಮಾವು ಹಣ್ಣಾದರೆ ಅದನ್ನು ದೀರ್ಘಾವಧಿ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮಾವು ಬೆಳೆಗಾರ ಹಾಗೂ ಗೇಣಿದಾರ ನಷ್ಟ ಅನುಭವಿಸುತ್ತಿದ್ದಾರೆ. ಪ್ರಕೃತಿ ವಿಕೋಪ, ವಾತಾವರಣ ವೈಪರೀತ್ಯ, ಬೆಲೆ ಏರಿಳಿಕೆಯಿಂದ ತತ್ತರಿಸುವಂತಾಗಿದೆ. ಹಣ್ಣುಗಳನ್ನು ಕೆಡದಂತೆ ದೀರ್ಘಾವಧಿ ಸಂರಕ್ಷಿಸಲು ಶೀತಲಿಕರಣ ಘಟಕದ ಅವಶ್ಯಕತೆ ಇದೆ. ತೋಟಗಾರಿಕೆ ಇಲಾಖೆ ಮಂತ್ರಿ ಜಿಲ್ಲೆಯವರೇ ಆದ ಕಾರಣ ಇತ್ತ ಕಡೆ ಗಮನಹರಿಸಿ ಮಾವು ಬೆಳೆಗೆ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ ಇಲ್ಲಿನ ಮಾವು ಬೆಳೆಗಾರರು.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.