ADVERTISEMENT

ಮುಂಗಾರು ಸಂಪೂರ್ಣ ವಿಫಲ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 9:30 IST
Last Updated 20 ಜುಲೈ 2012, 9:30 IST

ಹೊನ್ನಾಳಿ:  ಪ್ರತಿ ವರ್ಷ ಮೇ ತಿಂಗಳ ಮೂರು-ನಾಲ್ಕನೆಯ ವಾರ ಇಲ್ಲವೇ ಜೂನ್ ತಿಂಗಳ ಮೊದಲನೆಯ ವಾರದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಆದರೆ, ಈ ಬಾರಿ ಮಳೆಯ ತೀವ್ರ ಕೊರತೆ ಹಿನ್ನೆಲೆಯಲ್ಲಿ ರೈತರು ಮುಗಿಲಿನತ್ತ ಮುಖ ಮಾಡಿದ್ದಾರೆ.

ಅಂತರ್ಜಲ ಮರುಪೂರಣಕ್ಕೆ ಅವಕಾಶ ನೀಡದಿರುವುದು, ಮಿತಿಮೀರಿದ ಮರಳು ಸಾಗಾಟದ ಪರಿಣಾಮ ನದಿ ಹೆಚ್ಚಿನ ನೀರು ಧಾರಣ ಶಕ್ತಿ ಕಳೆದುಕೊಂಡಿರುವುದು... ಇವೆಲ್ಲವೂ ಮಳೆ ಕೊರತೆಗೆ ಕಾರಣ ಎಂಬುದು ತಜ್ಞರ ಅಭಿಪ್ರಾಯ.

ನಮ್ಮ ಜನಪದರ ಇನ್ನೊಂದು ನಂಬಿಕೆ ಈ ಬಾರಿ ನಿಜವಾಗಿದೆ. ಅದೇನೆಂದರೆ, “ಅಶ್ವಿನಿ ಮಳೆ ಬಂದರೆ ಏಳು ಮಳೆಗಳು ಸುರಿಯುವುದಿಲ್ಲ” ಎಂಬುದು. ಈ ಬಾರಿ ಏಪ್ರಿಲ್ ಮೂರು ಮತ್ತು ನಾಲ್ಕನೇ ವಾರದಲ್ಲಿ ಅಶ್ವಿನಿ ಮಳೆ ಉತ್ತಮವಾಗಿ ಸುರಿದಿತ್ತು. ಅಶ್ವಿನಿಯಿಂದ ಮೊದಲುಗೊಂಡು ಭರಣಿ, ಕೃತ್ತಿಕಾ, ರೋಹಿಣಿ, ಆರಿದ್ರಾ, ಹಿರೇಪುಷ್ಯ, ಚಿಕ್ಕಪುಷ್ಯ ಮಳೆಯವರೆಗೆ ಮಳೆ ಸುರಿಯುವುದಿಲ್ಲ ಎಂಬುದು ನಂಬಿಕೆ. ಈಗ ಆರಿದ್ರಾ ಮಳೆಯ ಕಾಲ. ಇನ್ನೂ ಎರಡು ಮಳೆಯ ನಂತರ ಆಶ್ಲೇಷಾ ಮಳೆ ಸುರಿಯುತ್ತದೆ ಎಂಬುದು ಜನಪದರ ಬಲವಾದ ನಂಬಿಕೆ. ಇದು ನಿಜವಾದರೆ, ಈ ಬಾರಿಯ ಮುಂಗಾರು ಸಂಪೂರ್ಣವಾಗಿ ವಿಫಲವಾದಂತೆ.

ಇದನ್ನು ಪುಷ್ಟೀಕರಿಸುವಂತೆ ಜುಲೈ ಮೊದಲ ವಾರ ಮುಗಿಯುತ್ತಾ ಬಂದರೂ ಮಳೆಯ ಸುಳಿವೇ ಇಲ್ಲದಿರುವುದು ಬರೀ ರೈತರಲ್ಲಷ್ಟೇ ಅಲ್ಲ, ಎಲ್ಲ ವರ್ಗಗಳ ಜನತೆಯಲ್ಲೂ ತೀವ್ರ ಆತಂಕ ಸೃಷ್ಟಿಸಿದೆ.

ರೈತರು ಮಳೆ ಸುರಿಯಲೆಂದು ವಿವಿಧ ದೇವರುಗಳ ಮೊರೆ ಹೋಗುತ್ತಿದ್ದಾರೆ. ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಕಳೆದ ವಾರ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಮಂಡೂಕ ಮದುವೆ ಮಾಡಿದರು. ತಾಲ್ಲೂಕಿನ ಇತರೆಡೆಯೂ ಮಳೆಗಾಗಿ ಪ್ರಾರ್ಥಿಸಿ ಪೂಜೆ- ಪುನಸ್ಕಾರಗಳನ್ನು ನಡೆಸಲಾಗುತ್ತಿದೆ.

ತಾಲ್ಲೂಕಿನ ಅನೇಕ ಭಾಗಗಳ ರೈತರು ಮಳೆ ಕೊರತೆ ಹಿನ್ನೆಲೆಯಲ್ಲಿ ಹೆಚ್ಚು ನೀರು ಅಪೇಕ್ಷಿಸುವ ಬೆಳೆಗಳ ಬದಲಾಗಿ ಕಡಿಮೆ ನೀರುಂಡು ಬೆಳೆಯುವ ಮೆಕ್ಕೆಜೋಳ, ಊಟದ ಜೋಳ, ರಾಗಿ ಬೆಳೆಯುವತ್ತ ಚಿತ್ತ ಹರಿಸುತ್ತಿದ್ದಾರೆ.

ಎಲ್ಲವನ್ನೂ, ಎಲ್ಲರ ದುಷ್ಕೃತ್ಯಗಳನ್ನು ಮನ್ನಿಸಿ ವರುಣ ದೇವ ಕೃಪೆ ತೋರಲಿ ಎಂಬುದು ಎಲ್ಲರ ಮೊರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.