ADVERTISEMENT

ಮೂಡಲಪಾಯ ಪರಿಷ್ಕರಣೆಗೆ ಒಡ್ಡಿಕೊಳ್ಳಲಿ

ಯಕ್ಷ ಸಂಭ್ರಮದಲ್ಲಿ ಜನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 9:51 IST
Last Updated 31 ಡಿಸೆಂಬರ್ 2017, 9:51 IST

ದಾವಣಗೆರೆ: ಮೂಡಲಪಾಯ ಪರಿಷ್ಕರಣೆಗೆ ಒಡ್ಡಿಕೊಂಡರೆ ಮಾತ್ರ ಯಕ್ಷಗಾನದಂತೆ ಬೆಳೆಯಲು ಸಾಧ್ಯ ಎಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.

ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಶನಿವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ, ಹವ್ಯಾಸಿ ಗ್ರಾಮೀಣ ರಂಗಭೂಮಿ ಜಾನಪದ ಯಕ್ಷಗಾನ ಬಯಲಾಟ ಮತ್ತು ವಿವಿಧ ಕಲಾವಿದರ ಸಂಘ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ, ಯಕ್ಷ ಕಲಾ ರಂಗ, ಯಕ್ಷಗಾನ ಸಂಸ್ಥೆ ಏರ್ಪಡಿಸಿರುವ ಯಕ್ಷ ಸಂಭ್ರಮ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನ ಆಧುನಿಕತೆಗೆ ತಕ್ಕಂತೆ ಪರಿಷ್ಕರಣೆಗೆ ಒಳಪಟ್ಟಿದೆ. ಸುಶಿಕ್ಷಿತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಯಕ್ಷಗಾನ ವಿಶ್ವದ ಅಗ್ರಗಣ್ಯ ಕಲೆಗಳಲ್ಲಿ ಗುರುತಿಸಿಕೊಂಡಿದೆ. ಈ ಭಾಗ್ಯ ಮೂಡಲಪಾಯಕ್ಕೆ ಒದಗಿಬಂದಿಲ್ಲ. ಇದಕ್ಕೆ ಕಲಾವಿದರು, ಪ್ರೇಕ್ಷಕರೇ ಕಾರಣ. ಹೀಗಾಗಿ ಬಡಗುತಿಟ್ಟು ಹೆಚ್ಚು ಬೆಳೆಯುವಲ್ಲಿ ಹಿಂದೆಬಿದ್ದಿದೆ ಎಂದರು.

ADVERTISEMENT

ಕರಾವಳಿ ಜಿಲ್ಲೆಗಳಲ್ಲಿ ದೇವಸ್ಥಾನಗಳಲ್ಲಿ ವೃತ್ತಿನಿರತ ಯಕ್ಷ ತಂಡಗಳಿವೆ. ಭಾಗವತಿಕೆ, ಮುಖವರ್ಣಿಕೆ, ವೇಷಭೂಷಣ ಕಲಾವಿದರು ಪೂರ್ಣಕಾಲ ಯಕ್ಷ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಮೂಡಲಪಾಯದಲ್ಲಿ ಈ ರೀತಿ ತೊಡಗಿಸಿಕೊಳ್ಳವಿಕೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಅಕಾಡೆಮಿ, ಬಯಲಾಟ ಅಕಾಡೆಮಿಗಳು ಮೂಡಲಪಾಯ ಕಮ್ಮಟ ಏರ್ಪಡಿಸಬೇಕು. ಕಲಾವಿದರು, ಮೇಳದವರು, ಭಾಗವತರು, ಮುಖವರ್ಣಿಗೆ ಹಾಕುವವರು, ಹಾಡುವವರನ್ನು ಕಮ್ಮಟದಲ್ಲಿ ಬಳಸಿಕೊಳ್ಳಬೇಕು. ಕನಿಷ್ಠ 50 ಮಂದಿಗೆ ತರಬೇತಿ ನೀಡಬೇಕು. ಪರಿಷ್ಕರಣೆಗಳನ್ನು ತರಬೇಕು. ವಿಮರ್ಶಕರು ಪರಿಷ್ಕರಣೆಗಳನ್ನು ಪರಾಮರ್ಶಿಸಿ, ತಿದ್ದುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ‘ಜನಪದ ಕಲೆಗಳು ಮನಸ್ಸನ್ನು ಅರಳಿಸುತ್ತವೆ. ಸಕಾರಾತ್ಮಕ ಭಾವನೆಯನ್ನು ಮೂಡಿಸುತ್ತವೆ. ಕೆಲ ಸಿನಿಮಾಗಳನ್ನು ನೋಡಿದರೆ ತಲೆನೋವು ಬಂದು ಮಲಗಬೇಕು ಎನಿಸುತ್ತದೆ. ಇದೇ ಆಧುನಿಕ ಮತ್ತು ಜಾನಪದ ಮಾಧ್ಯಮಗಳಿಗೂ ಇರುವ ಅಂತರ’ ಎಂದರು.

ನಾಟಕವನ್ನೋ, ಯಕ್ಷಗಾನವನ್ನೋ ನೋಡಿದ ಮೇಲೆ ಓದಿನೋಡಿ, ಅದು ಹೆಚ್ಚು ನೆನಪುಳಿಯುತ್ತದೆ. ಪಠ್ಯವಿಷಯದ ಜತೆಗೆ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚು ಇರುತ್ತದೆ. ಯಕ್ಷಗಾನ ಸಹ ಮಕ್ಕಳ ಬೆಳವಣಿಗೆಗೆ ಸಹಕಾರಿ ಎಂದು ಹೇಳಿದರು.

ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ದಾದಾಪೀರ್‌ ನವಿಲೇಹಾಳ್‌ ಮಾತನಾಡಿ, ‘ಯಕ್ಷಗಾನ ಸಮೃದ್ಧವಾಗಿ ಬೆಳೆಯಲು, ಅದರ ಪ್ರಾದೇಶಿಕ ಹಿನ್ನೆಲೆಯೂ ಕಾರಣ. ಕರಾವಳಿ ಪ್ರದೇಶದಲ್ಲಿ ದೇವಾಲಯಗಳು, ಭೂತಾರಾಧನೆ ಅಧಿಕ. ಯಕ್ಷಗಾನ ದೇವತಾರಾಧನೆಯ ಭಾಗವೂ ಆಗಿದೆ. ಅಧ್ಯಾತ್ಮ ಮತ್ತು ಪುರಾಣದ ಸ್ಪರ್ಶವೂ ಯಕ್ಷಗಾನಕ್ಕಿದೆ’ ಎಂದು ತಿಳಿಸಿದರು.

ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ.ಎಚ್‌.ವಿಶ್ವನಾಥ್, ‘ಪ್ರೇಕ್ಷಕರಲ್ಲಿ ನವರಸಾನುಭವಗಳನ್ನು ಮೂಡಿಸಬಲ್ಲ ಸಶಕ್ತ ಕಲಾಪ್ರಕಾರ ಯಕ್ಷಗಾನ. ಉತ್ತರ ಕರ್ನಾಟಕ ಭಾಗದ ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ ಸಹ ಶ್ರೇಷ್ಠ ಪ್ರಕಾರಗಳು. ಆದರೆ, ಅವನ್ನು ಬೆಳೆಸಲು ತುರ್ತು ಎದುರಾಗಿದೆ’ ಎಂದರು.

ಯಕ್ಷಗಾನ ಅಕಾಡೆಮಿ ಆಡಳಿತಾಧಿಕಾರಿ ಬಲವಂತರಾವ್‌ ಪಾಟೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ಮಾಜಿ ಸದಸ್ಯ ಡಾ.ಗುರುನಾಥ್, ಎನ್‌.ಎಸ್.ರಾಜು, ಸಿದ್ದಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಎಸ್‌.ಶಿವಣ್ಣ, ಪ್ರಾಂಶುಪಾಲರಾದ ಜಸ್ಟಿನ್‌ ಡಿಸೋಜ, ದೊಗ್ಗಳ್ಳಿ ಗೌಡ್ರು ಪುಟ್ಟರಾಜು ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.