ADVERTISEMENT

ಮೂಲಸೌಕರ್ಯ ಇಲ್ಲದ ಆಯರ್ವೇದ ಆಸ್ಪತ್ರೆ!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 9:14 IST
Last Updated 6 ಡಿಸೆಂಬರ್ 2013, 9:14 IST

ಮಾಯಕೊಂಡ:   ಮೂಲಸೌಕರ್ಯ ಗಳಿಂದ ವಂಚಿತವಾಗಿರುವ ಆಯುರ್ವೇದ ಆಸ್ಪತ್ರೆಯನ್ನು ರದ್ದು ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಹುಲಿಕಟ್ಟೆಯ ಗ್ರಾಮ ಪಂಚಾಯ್ತಿ ಸದಸ್ಯ ಆಂಜಿನಪ್ಪ ಮುಖಂಡರಾದ ಬಸವರಾಜಪ್ಪ, ದೇವೇಂದ್ರಪ್ಪ, ಮುರಿಗೇಂದ್ರಪ್ಪ ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ವರ್ಷಗಳ ಹಿಂದೆ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲಾಗಿತ್ತು. ಇಂದಿಗೂ ಯಾವುದೇ ಮೂಲಸೌಕರ್ಯ ದೊರೆತಿಲ್ಲ. ಆಸ್ಪತ್ರೆಯಲ್ಲಿ ಸೂಕ್ತ ವಿದ್ಯುತ್ ಸೌಲಭ್ಯವಿಲ್ಲ, ಕುಡಿಯಲು ನೀರು ಇಲ್ಲ. ಒಬ್ಬ ವೈದ್ಯ ಮತ್ತು ಒಬ್ಬ ಡಿ ದರ್ಜೆ ನೌಕರ ಮಾತ್ರ  ಇದ್ದು, ಉಳಿದ ಸಿಬ್ಬಂದಿ ಭರ್ತಿಮಾಡಿಲ್ಲ.  ಆಸ್ಪತ್ರೆಯ ಔಷಧಿಗೆ ಹೆಚ್ಚಿನ ಅನುದಾನ ಬರುವುದಿಲ್ಲ.  ಈ ಆಸ್ಪತ್ರೆಯಲ್ಲಿ ನೀಡುವ ಔಷಧಿ ಮಾತ್ರೆಗಳಿಂದ ಕಾಯಿಲೆಗಳು ಬೇಗ ಗುಣವಾಗುವುದಿಲ್ಲ. ಒಳ ರೋಗಿ ದಾಖಲಾತಿ, ತುರ್ತು ಚಿಕಿತ್ಸೆ, ಹೆರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಅಗತ್ಯ ಚಿಕಿತ್ಸೆ ದೊರೆಯದೇ ಜನ ಕಂಗಾಲಾಗಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸಿದೆ. ಸಣ್ಣ ಪುಟ್ಟ ಆರೋಗ್ಯದ ತೊಂದರೆಗಳಿಗೂ  ದಾವಣಗೆರೆ ಆಸ್ಪತ್ರೆಯನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಆಯುರ್ವೇದ ಆಸ್ಪತ್ರೆ ರದ್ದು ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದಲ್ಲದೆ ಸಂಬಂಧಪಟ್ಟ ಇಲಾಖೆಗೆ ಲೆಕ್ಕ ತೋರಿಸಲು ಹೊರ ರೋಗಿಗಳ ಹೆಸರು ಸುಮ್ಮನೆ ಬರೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಯನ್ನು ರದ್ದುಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡದಿದ್ದರೆ ಆಸ್ಪತ್ರೆಯ ಬಾಗಿಲು ಹಾಕಿ ಪ್ರತಿಭಟನೆ ನಡೆಸುವುದಾಗಿ ಗ್ರಾಮದ ಮುಖಂಡರಾದ ಸಿದ್ದಬಸಪ್ಪ, ಹಾಲ ಸಿದ್ದಪ್ಪ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.