ADVERTISEMENT

ಮೆಕ್ಕೆಜೋಳದಲ್ಲಿ ಸೈನಿಕ ಹುಳು, ಲದ್ದಿಹುಳುವಿನ ಕಾಟ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 6:37 IST
Last Updated 8 ಅಕ್ಟೋಬರ್ 2017, 6:37 IST
ಹೊನ್ನಾಳಿ ತಾಲ್ಲೂಕು ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೆಕ್ಕೆಜೋಳದಲ್ಲಿನ ಸೈನಿಕ ಹುಳು
ಹೊನ್ನಾಳಿ ತಾಲ್ಲೂಕು ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೆಕ್ಕೆಜೋಳದಲ್ಲಿನ ಸೈನಿಕ ಹುಳು   

ಹೊನ್ನಾಳಿ: ತಾಲ್ಲೂಕಿನ ಅರಕೆರೆ, ಬೇಲಿಮಲ್ಲೂರು, ನರಸಗೊಂಡನಹಳ್ಳಿ, ಮಾಸಡಿ ಭಾಗಗಳ ಹಲವು ಗ್ರಾಮಗಳು ಸೇರಿದಂತೆ ಒಟ್ಟು 1720 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳದಲ್ಲಿ ಸೈನಿಕ ಹುಳು ಹಾಗೂ ಲದ್ದಿ ಹುಳುವಿನ ಬಾಧೆ ಕಂಡು ಬಂದಿದೆ ಎಂದು ಕೃಷಿ ಅಧಿಕಾರಿ ಶಂಷೀರ್ ಹೇಳಿದರು.

ಶನಿವಾರ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಕುಂದೂರು ವ್ಯಾಪ್ತಿಯ ಸಿಂಗಟಗೆರೆ, ತರಗನಹಳ್ಳಿ, ಬೇವಿನಹಳ್ಳಿ, ಮತ್ತಿತರೆ ಗ್ರಾಮಗಳು, ನ್ಯಾಮತಿ ವ್ಯಾಪ್ತಿಯ ಕೆಂಚಿಕೊಪ್ಪ, ಮಾದೇನಹಳ್ಳಿ ಮತ್ತಿತರೆ ಗ್ರಾಮಗಳಲ್ಲಿ ಸೈನಿಕ ಹುಳುಗಳ ಹಾವಳಿ ಹೆಚ್ಚಾಗಿದ್ದು, ಇವು ಒಂದೇ ದಿನದಲ್ಲಿ ಭಾಗಶಃ ಬೆಳೆಗಳನ್ನು ತಿಂದು ಮುಗಿಸುವಷ್ಟು ಸಾಮರ್ಥ್ಯ ಹೊಂದಿವೆ ಎಂದರು.

ಈ ರೀತಿಯ ಬಾಧೆ ಕಂಡು ಬಂದಂತಹ ರೈತರು ಅದರ ಹತೋಟಿಗಾಗಿ ಪ್ರತಿ ಹೆಕ್ಟೇರ್ ಗೆ 50 ಕೆ.ಜಿ. ಭತ್ತದ ತೌಡು, 5 ಕೆ.ಜಿ. ಬೆಲ್ಲ, 625 ಮಿ.ಲೀ ಮಾನೋಕ್ರೋಟೋಪಾಸ್, 250 ಮಿ.ಲೀ ನುವಾನ್‌ನ್ನು 10 ಲೀಟರ್ ನೀರಿನಲ್ಲಿ ಕರಗಿಸಿ ವಿಷ ಪಾಷಾಣ ಮಾಡಬೇಕು ಎಂದರು.

ADVERTISEMENT

ರಾತ್ರಿ ಕಳೆಯಲು ಬಿಟ್ಟು, ನಂತರ ಸಂಜೆ 5 ಗಂಟೆ ವೇಳೆ ಕೈಗವಚ ಹಾಕಿಕೊಂಡು ಎರಡು ಸಾಲಿಗೊಂದರಂತೆ ಎರಡು ಮೀಟರ್ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಬೆಳೆಗಳಲ್ಲಿಟ್ಟು ಹುಳುಗಳನ್ನು ಆಕರ್ಷಿಸುವ ಮೂಲಕ ಹತೋಟಿಗೆ ತರಬಹುದು. ಇದನ್ನು ಸಾಮೂಹಿಕವಾಗಿ ಮಾಡಿದರೆ ಬೇಗ ಹತೋಟಿಗೆ ಬರಲಿದೆ ಎಂದು ತಿಳಿಸಿದರು.

‌ರೈತರ ಕೆಲವು ಜಮೀನುಗಳಿಗೆ ಭೇಟಿ ನೀಡಿದ ಶಾಸಕ ಡಿ.ಜಿ ಶಾಂತನಗೌಡ ಅವರು ಕೂಡಾ ಆತಂಕ ವ್ಯಕ್ತಪಡಿಸಿದರು. ತಕ್ಷಣ ಹುಳುಗಳ ಹತೋಟಿಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ದಾಕ್ಷಾಯಣಮ್ಮ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷೆ ಇಂದ್ರಮ್ಮ, ಮುಖಂಡ ಮಧುಗೌಡ, ಎಂ.ನಾಗರಾಜ್, ಕೃಷಿ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.