ADVERTISEMENT

ಮೈಲಾರಲಿಂಗೇಶ್ವರ ಜಾತ್ರೆಗೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:20 IST
Last Updated 24 ಫೆಬ್ರುವರಿ 2011, 9:20 IST

ಮಲೇಬೆನ್ನೂರು: ‘ಏಳು ಕೋಟಿ, ಏಳು ಕೋಟಿ, ಏಳುಕೋಟಿಗೋ ಚಾಂಗಮಲೋ’ ಘೋಷಣೆ ಕೂಗುತ್ತಿದ್ದಂತೆ ಗೋರಪ್ಪ ಕಾಲಿನ ಮೀನ ಖಂಡದ ಭಾಗಕ್ಕೆ ಬೆಣೆ ಹೊಡೆದರೆ, ಇನ್ನೋರ್ವ ಮುಳ್ಳುಕಂಟಿ ಕಡ್ಡಿ ಹಾಗೂ ಹಗ್ಗ ತೂರಿಸಿ ಪ್ರದರ್ಶಿಸಿದ ಮೈನವೀರೆಳಿಸುವಸುವ ಕಾಲಶಸ್ತ್ರ ಪವಾಡ ಕಾರ್ಯಕ್ರಮ ಸಮೀಪದ ದೇವರಬೆಳಕೆರೆಯಲ್ಲಿ ಜನಮನ ಸೆಳೆಯಿತು.
ಮೈಲಾರಲಿಂಗೇಶ್ವರ ಜಾತ್ರೆ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಪವಾಡೋತ್ಸವ ಸಾಂಪ್ರದಾಯಿಕವಾಗಿ ಜರುಗಿದವು.

ಕಲ್ಲಿಗೆ ಸುತ್ತಿದ್ದ ಸರಪಳಿಯನ್ನು ಬರಿಗೈನಿಂದ ಎಳೆದು ತುಂಡರಿಸುವುದು, ಚೂಪಾದ ತಂತಿಯಿಂದ ಮಾಡಿದ ದೀಪಾರತಿ ಕೈಗೆ ಚುಚ್ಚಿಕೊಂಡು ಬೆಳಗಿಸುವ ದೃಶ್ಯ ಜನತೆ ಸವಿದರು.  ಪವಾಡ ಕಾರ್ಯಕ್ರಮದ ನಂತರ ಗೋರಪ್ಪನ ತಂಡ ಭಂಡಾರ ಹಚ್ಚಿಕೊಂಡು ಸಾಮಾನ್ಯರಂತೆ ಇಳಿದದ್ದು ವಿಶೇಷವಾಗಿತ್ತು ಡಮರುಗ ಬಾರಿಸುತ್ತಿದ್ದ ಗೊರವರ ತಂಡ, ಚಾಮರ ಸೇವೆ, ಚಾಟಿ ಹೊಡೆದುಕೊಳ್ಳುವವರು ಹಾಗೂ ದೀವಟಿಗೆ ಬೆಳಗಿಸುವವರು ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹರಕೆ ಹೊತ್ತ ಭಕ್ತ ಜನರು ದಿಂಡು ಉರುಳುವುದು, ಜವಳ , ಬಾಯಿಬೀಗ ಮತ್ತು ದೋಣಿ ತುಂಬಿಸುತ್ತಿದ್ದರು.

ಉತ್ಸವದ ಕೊನೆಗೆ ದೇವಾಲಯದ ಆವರಣದಲ್ಲಿ ಓಕುಳಿಯಾಟ ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತಲ ಗ್ರಾಮದ ಉತ್ಸವಮೂರ್ತಿಗಳು ಹಾಜರಿದ್ದವು. ಜಾತ್ರೆ ಹಾಗೂ ಪವಾಡ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸೇರಿದ್ದರು.ಮೈಲಾರದ ಕಾರ್ಣಿಕೋತ್ಸವ ಜಾತ್ರೆ ಮುಗಿದ ಮೂರು ದಿನದ ನಂತರ ಇಲ್ಲಿ ಜಾತ್ರೆ ನಡೆಯುತ್ತದೆ ಎಂದು ಆಯೋಜಕರು ತಿಳಿಸಿದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.