ADVERTISEMENT

ರಕ್ತದಾನಕ್ಕೆ ಬದ್ಧರಾಗಲು ಶಿವಯೋಗಿಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 10:15 IST
Last Updated 9 ಜನವರಿ 2012, 10:15 IST

ದಾವಣಗೆರೆ: ನಗರದ ಲೆಕ್ಕ ಪರಿಶೋಧಕರ ಸಂಸ್ಥೆ, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ, ಎಸ್‌ಎಸ್ ಆಸ್ಪತ್ರೆ ಮತ್ತು ಭಾರತೀಯ ರೆಡ್‌ಕ್ರಾಸ್ ಆಶ್ರಯದಲ್ಲಿ ಈಚೆಗೆ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ರಕ್ತದಾನ ಮಾಡಿ ಎಂದು ಹೇಳುವ ಮುಂಚೆ, ನಾವು ರಕ್ತದಾನ ಮಾಡಬೇಕು. ನುಡಿದಂತೆ ನಾವು ನಡೆದುಕೊಳ್ಳಬೇಕು ಎಂದು ಹೇಳಿದರು.

ರೆಡ್‌ಕ್ರಾಸ್ ಸಂಸ್ಥೆಯ ಡಾ.ಬಿ.ಟಿ. ಅಚ್ಯುತ ಮಾತನಾಡಿ, ರಕ್ತದ ಆವಶ್ಯಕತೆ ಇದ್ದರೆ, ಆಸ್ಪತ್ರೆಗಳಲ್ಲಿ ಒಂದು ಬಾಟಲಿ ರಕ್ತ ನೀಡಿದರೆ, ಅದರ ಬದಲಿಗೆ ಯಾವ ಗುಂಪಿನ ರಕ್ತ ಬೇಕಾಗಿರುತ್ತದೆಯೋ ಅದನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಲೆಕ್ಕ ಪರಿಶೋಧಕರ ಸಂಸ್ಥೆಯ ಗೌರವಾಧ್ಯಕ್ಷ ಅಥಣಿ ಎಸ್. ವೀರಣ್ಣ, ಡಾ.ಶಶಿಕಲಾ ಕೃಷ್ಣಮೂರ್ತಿ, ಡಾ.ದೀಪ್ತಿ ಮತ್ತಿತರರು ಹಾಜರಿದ್ದರು. ಸಿಎಎ ಅಧ್ಯಕ್ಷ ಮಹೇಶ್ ಜಿ. ಸೆಂಡಗಿ ಸ್ವಾಗತಿಸಿದರು. ಕಾರ್ಯದರ್ಶಿ ರಾಜು ಮಹೇಂದ್ರಕರ್ ವಂದಿಸಿದರು. ವಿನಾಯಕ್ ಜೋಷಿ ಕಾರ್ಯಕ್ರಮ ನಿರೂಪಿಸಿದರು.

ಫೋಟೋಗ್ರಾಫರ್ಸ್‌ ಅಸೋಸಿಯೇಷನ್‌ಗೆ ಆಯ್ಕೆ
ದಾವಣಗೆರೆ ಫೋಟೋಗ್ರಾಫರ್ ಯೂತ್ಸ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಈಚೆಗೆ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವಿ. ಪ್ರಸನ್ನಕುಮಾರ್ (ಗೌರವಾಧ್ಯಕ್ಷ), ಎಚ್.ಕೆ. ಚನ್ನಬಸವರಾಜು (ಅಧ್ಯಕ್ಷ), ಎಂ.ಆರ್. ಆನಂದಕುಮಾರ್ (ಉಪಾಧ್ಯಕ್ಷ), ವಿಜಯ್ ಜಾಧವ್ (ಕಾರ್ಯದರ್ಶಿ), ಪಂಚಾಕ್ಷರಿ, ಶ್ರೀನಾಥ್ ಪಿ. ಅಗಡಿ (ಸಹ ಕಾರ್ಯದರ್ಶಿಗಳು), ಶಂಭು ಶಿಕಾರಿ (ಖಜಾಂಚಿ), ಬಸವರಾಜ್, ನಾಗರಾಜ್ (ಸಂಚಾಲಕರು), ಕೆ.ಪಿ. ನಾಗರಾಜ್, ಅರುಣ್‌ಕುಮಾರ್, ತಿಲಕ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ಮಂಜು, ರಾಜಶೇಖರ್, ರಮೇಶ್, ವಸಂತಕುಮಾರ್, ಯೋಗೇಶ್, ನಿರ್ಮಲಾ, ಸಿ.ಬಿ. ಸಾವಿತ್ರಿ (ಎಲ್ಲರೂ ನಿರ್ದೇಶಕರು).

ಆರೋಗ್ಯ ತಪಾಸಣೆ
ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ನಿವೃತ್ತ ನೌಕರರ ಸಂಘದ ವತಿಯಿಂದ ಸಂಘದ ಸದಸ್ಯರು ಮತ್ತು ಕುಟುಂಬ ವರ್ಗಕ್ಕೆ ಸಂಘದ ಆವರಣದಲ್ಲಿ ಜ. 15ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಹೃದಯ, ಮಧುಮೇಹ, ರಕ್ತದೊತ್ತಡ, ನೇತ್ರ ಮತ್ತು ಕೀಲು-ಮೂಳೆ ಕಾಯಿಲೆಗೆ ಸಂಬಂಧಪಟ್ಟಂತೆ ಅನುಭವಿ ತಜ್ಞರು ತಪಾಸಣೆ ಮಾಡುವರು. ಅಂದು ಬೆಳಿಗ್ಗೆ 9ಕ್ಕೆ ಶಿಬಿರ ಆರಂಭವಾಗುವುದು. ಸಕ್ಕರೆ ಕಾಯಿಲೆ ಪರೀಕ್ಷೆಗೆ ಬರುವವರು ಖಾಲಿ ಹೊಟ್ಟೆಯಲ್ಲಿ ಬರಲು ತಿಳಿಸಲಾಗಿದೆ. ಸದಸ್ಯರು ಜ. 12ರ ಒಳಗೆ ಹೆಸರು ನೋಂದಾಯಿಸಬೇಕು. ಸದಸ್ಯತ್ವದ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು ಎಂದು ಪ್ರಕಟಣೆ ತಿಳಿಸಿದೆ.

`ಆಧಾರ್~ ಹೆಸರಲ್ಲಿ ವಂಚನೆ ಆರೋಪ
ಕೇಂದ್ರ ಸರ್ಕಾರದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ `ಆಧಾರ್~ ಯೋಜನೆಯ ಹೆಸರಿನಲ್ಲಿ `ಟ್ರೈನಿ~ ಪ್ರಶಿಕ್ಷಣಾರ್ಥಿಗಳಿಗೆ ಮೋಸ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ.

ಡಿಎಚ್‌ಐಐ ಮಾನವ ಸಂಪನ್ಮೂಲ ಸಂಸ್ಥೆ ಮತ್ತು ದಾವಣಗೆರೆಯ ಜೆಟ್ ಕಿಂಗ್ ಸಂಸ್ಥೆ, ಇ-ಸಮೃದ್ಧಿ ಸಂಸ್ಥೆ ಸೇರಿ ಅಭ್ಯರ್ಥಿಗಳಿಂದ ಅನಧಿಕೃತವಾಗಿ ವಸೂಲಿ ಮಾಡಿರುವ ಮೊತ್ತ ್ಙ 2,600 ಮತ್ತು ತರಬೇತಿ ಭತ್ಯೆ ್ಙ 2,400ಗಳನ್ನು ವಾಪಸ್ ನೀಡಬೇಕು. ಪ್ರತಿ ತಿಂಗಳು 6ರ ಒಳಗೆ ಸಂಭಾವನೆಯನ್ನು ಅಭ್ಯರ್ಥಿಗಳಿಗೆ ನೇರವಾಗಿ ಮತ್ತು ಪೂರ್ತಿಯಾಗಿ ತಲುಪುವಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಶಿಕ್ಷಣಾರ್ಥಿಗಳಾದ ಮಲ್ಲಿಕಾರ್ಜುನ, ದೇವರಾಜ, ಲೋಕೇಶ, ಮಂಜುನಾಥ, ಸಮಿಉಲ್ಲಾಖಾನ್, ವೆಂಕಟೇಶ್ ಇತರರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.