ADVERTISEMENT

ರವೀಂದ್ರನಾಥ್‌ಗೆ ಗೆಲುವಿನ ‘ಉತ್ತರ’

ಹರಿಹರದಲ್ಲಿ ರಾಮಪ್ಪ, ಜಗಳೂರಿನಲ್ಲಿ ರಾಮಚಂದ್ರ, ಹರಪನಹಳ್ಳಿಯಲ್ಲಿ ರೆಡ್ಡಿಗೆ ಜಯ

ಬಾಲಚಂದ್ರ ಎಚ್.
Published 16 ಮೇ 2018, 6:27 IST
Last Updated 16 ಮೇ 2018, 6:27 IST
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಎಸ್.ಎ.ರವೀಂದ್ರನಾಥ್‌
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಎಸ್.ಎ.ರವೀಂದ್ರನಾಥ್‌   

ದಾವಣಗೆರೆ: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ದಾವಣಗೆರೆ ಉತ್ತರದ ಫಲಿತಾಂಶ ಗಮನ ಸೆಳೆದಿತ್ತು. ಘಟಾನುಘಟಿ ನಾಯಕರಾದ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಹಾಗೂ ಎಸ್‌.ಎ.ರವೀಂದ್ರನಾಥ್ ಪರಸ್ಪರ ಮುಖಾಮುಖಿಯಾಗಿದ್ದು ಇದಕ್ಕೆ ಕಾರಣ.

ಉತ್ತರ ಕ್ಷೇತ್ರದ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ ಸ್ಪಷ್ಟ ಮೇಲುಗೈ ಸಾಧಿಸಿದರು. ಮೊದಲ ಸುತ್ತಿನಲ್ಲೇ 2,103 ಮತಗಳ ಮುನ್ನಡೆ ಪಡೆದರು. 2ನೇ ಸುತ್ತಿನಲ್ಲಿ 4566, 3ರಲ್ಲಿ 6,264 ಹೀಗೆ ಅಂತರ ಹೆಚ್ಚುತ್ತಲೇ ಸಾಗಿತು. ಆದರೆ, 6ನೇ ಸುತ್ತಿನಲ್ಲಿ ಪ್ರಮಾಣ ಇದ್ದಕ್ಕಿದ್ದಂತೆ ಕುಸಿಯಿತು.

ಅಂತರ ಕುಸಿತವಾಗಿದ್ದು ಫಲಿತಾಂಶದ ಮುನ್ಸೂಚನೆಯಂತೆ ಕಂಡುಬಂತು. ಮುಂದಿನ ಸುತ್ತುಗಳಲ್ಲಿ ಎಸ್‌ಎಸ್‌ಎಂ ಚೇತರಿಸಿಕೊಂಡರು. 9ರಲ್ಲಿ ಅಂತರ 7,141ಕ್ಕೆ ಹೆಚ್ಚಾಗಿತ್ತು. ಈ ಹಂತದಲ್ಲಿ ಎಸ್‌ಎಸ್‌ಎಂ ಗೆಲುವಿನ ಹಾದಿ ಸುಲಭವಾಯಿತು ಎನ್ನುವಾಗಲೇ 11ನೇ ಸುತ್ತು ಆಘಾತ ನೀಡಿತು. ಈ ಹಂತದಲ್ಲಿ 5751, 12ರಲ್ಲಿ  4,156, 13ರಲ್ಲಿ  2,481, 14ರಲ್ಲಿ 1,123, ಹೀಗೆ ಮತಗಳ ಪ್ರಮಾಣ ಇಳಿಮುಖವಾಗುತ್ತಾ ಸಾಗಿತು. 15ನೇ ಸುತ್ತಿನಲ್ಲಿ ಎಸ್.ಎ.ರವೀಂದ್ರನಾಥ್ ಮೊದಲ ಬಾರಿಗೆ 707 ಮುನ್ನಡೆ ಪಡೆದರು. ಎಸ್‌ಎಆರ್ ಗೆಲುವಿನ ಹಾದಿಗೆ ಮರಳಿದ್ದು ಇದೇ ಸುತ್ತಿನಲ್ಲಿ.

ADVERTISEMENT

ಬಳಿಕ 16ರಲ್ಲಿ 3289, 17ರಲ್ಲಿ 3817, 18ರಲ್ಲಿ 3898, ಅಂತಿಮವಾಗಿ 4,071 ಮತಗಳ ಅಂತರದಲ್ಲಿ ಸಚಿವ ಮಲ್ಲಿಕಾರ್ಜುನ ವಿರುದ್ಧ ಎಸ್‌ಎಆರ್ ಜಯಭೇರಿ ಬಾರಿಸಿದರು.

ರಾಮಚಂದ್ರಗೆ ದೊಡ್ಡ ಅಂತರದ ಗೆಲುವು:

ಜಗಳೂರಿನಲ್ಲಿ ಆರಂಭದ ಸುತ್ತಿನಿಂದಲೂ ಬಿಜೆಪಿಯದ್ದೇ ಅಬ್ಬರ. ಜಿಲ್ಲೆಯಲ್ಲೇ ಅತಿ ಹೆಚ್ಚಿನ ಅಂತರದ ಗೆಲುವು ದಾಖಲಾಗಿರುವುದು ಇದೇ ಕ್ಷೇತ್ರದಲ್ಲಿ.

ಬಿಜೆಪಿ ಅಭ್ಯರ್ಥಿ ಎಸ್‌.ವಿ.ರಾಮಚಂದ್ರ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಚ್‌.ಪಿ.ರಾಜೇಶ್ ವಿರುದ್ಧ 29,221 ಅಂತರದಲ್ಲಿ ಗೆದ್ದಿದ್ದಾರೆ. ಮತ ಎಣಿಕೆ ಆರಂಭದಿಂದಲೂ ಕೊನೆಯ ಸುತ್ತಿನವರೆಗೂ ಈ ಕ್ಷೇತ್ರದಲ್ಲಿ ಬಿಜೆಪಿಯೇ ಮುನ್ನಡೆ ಕಾಯ್ದುಕೊಂಡಿದ್ದು ವಿಶೇಷ.

ಪ್ರತಿ ಹಂತದಲ್ಲೂ ಲೀಡ್‌ ನಿರೀಕ್ಷೆಗೂ ಮೀರಿ ಹೆಚ್ಚುತ್ತಾ ಸಾಗಿದ್ದು ಜಗಳೂರಿನಲ್ಲಿ ಬಿಜೆಪಿಯ ಅಲೆಯನ್ನು ಸಾಕ್ಷೀಕರಿಸುತ್ತಿತ್ತು. ಮೊದಲ ಸುತ್ತಿನಲ್ಲಿ 1768 ಮತಗಳ ಅಲ್ಪ ಮುನ್ನಡೆ ಸಾಧಿಸಿದ ರಾಮಚಂದ್ರ, ಎರಡನೇ ಸುತ್ತಿನಲ್ಲಿ ಅಂತರವನ್ನು ದ್ವಿಗುಣಗೊಳಿಸಿಕೊಂಡರು. ಕೇವಲ 6ನೇ ಸುತ್ತಿನಲ್ಲೇ 10745 ಲೀಡ್‌ ಪಡೆದು ಗೆಲುವಿನ ಸ್ಪಷ್ಟ ಸೂಚನೆ ನೀಡಿದರು.

12ನೇ ಸುತ್ತಿನಲ್ಲೇ 20 ಸಾವಿರ ಲೀಡ್‌ ಪಡೆದು ಗೆಲುವನ್ನು ಖಚಿತಪಡಿಸಿಕೊಂಡ ಎಸ್‌ವಿಆರ್, ಅಂತಿಮವಾಗಿ 29,221 ಮತಗಳ ಅಂತರದಲ್ಲಿ ರಾಜೇಶ್ ಅವರಿಗೆ ಸೋಲುಣಿಸಿದರು. ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿ ಪುಷ್ಪಾ ಲಕ್ಷ್ಮಣಸ್ವಾಮಿ ಕೇವಲ 1856 ಮತ ಪಡೆದರು.

ಹರಿಹರದಲ್ಲಿ ‘ಕೈ’ಗೆ ಸಿಹಿ:

ಹರಿಹರದಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಕಾಂಗ್ರೆಸ್‌ನ ಎಸ್.ರಾಮಪ್ಪ ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕ ಜೆಡಿಎಸ್‌ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದರೆ, ತೀವ್ರ ಪೈಪೋಟಿ ನೀಡಿದ ಬಿಜೆಪಿಯ ಬಿ.ಪಿ.ಹರೀಶ್‌ ಕಡಿಮೆ ಅಂತರದಲ್ಲಿ ಸೋಲುಂಡಿದ್ದಾರೆ.

ಮೊದಲ ಸುತ್ತಿನಲ್ಲಿ ಜೆಡಿಎಸ್ 152 ಮತಗಳ ಮುನ್ನಡೆ ಪಡೆದು ನಿರೀಕ್ಷೆ ಹುಟ್ಟಿಸಿದರೆ, 2ರಲ್ಲಿ ಬಿಜೆಪಿ ಲೀಡ್‌ ಪಡೆದು ಅಚ್ಚರಿ ಮೂಡಿಸಿತು. ಬಳಿಕ ಕಾಂಗ್ರೆಸ್‌ನದ್ದೇ ಮೇಲಾಟ. ಮೂರನೇ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಕಾಂಗ್ರೆಸ್‌ ಯಾರಿಗೂ ಮೊದಲ ಸ್ಥಾನ ಬಿಟ್ಟುಕೊಡಲೇ ಇಲ್ಲ. 11ನೇ ಸುತ್ತಿನ ಬಳಿಕ ಅಂತರದಲ್ಲಿ ಗಣನೀಯ ಕುಸಿತ ಕಂಡು ಆತಂಕ ಮೂಡಿಸಿದರೂ ರಾಮಪ್ಪ (60556) ಅವರ ಗೆಲುವಿಗೆ ಅಡ್ಡಿಯಾಗಲಿಲ್ಲ. 7,650 ಮತಗಳ ಅಂತರದಿಂದ ಬಿ.ಪಿಹರೀಶ್ (52906) ಅವರನ್ನು ಮಣಿಸಿ ಗೆಲುವಿನ ನಗೆ ಬೀರಿದರು.

ರೆಡ್ಡಿಯ ಆರ್ಭಟಕ್ಕೆ ಕಾಂಗ್ರೆಸ್‌ ಧೂಳೀಪಟ:

ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅರಳಿದೆ. ಹಾಲಿ ಶಾಸಕ ಎಂ.ಪಿ.ರವೀಂದ್ರ ‘ಕೈ’ ಸುಟ್ಟುಕೊಂಡಿದ್ದಾರೆ. ಆರಂಭದಲ್ಲೇ 453 ಮತ ಮುನ್ನಡೆ ಪಡೆದ ಕರುಣಾಕರ ರೆಡ್ಡಿ ಮತಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತ ಗೆಲುವಿನತ್ತ ಸಾಗಿದರು.

6ನೇ ಸುತ್ತಿನವರೆಗೂ ಸ್ಪಷ್ಟ ಮುನ್ನಡೆ ಪಡೆದರು. 7ನೇ ಸುತ್ತಿನಿಂದ ಮತಗಳ ಪ್ರಮಾಣ ಇಳಿಕೆಯಾಯಿತು. 10ನೇ ಸುತ್ತಿನಲ್ಲಂತೂ ಮುನ್ನಡೆಯ ಪ್ರಮಾಣ 180ಕ್ಕೆ ಕುಸಿದು ಹಿನ್ನಡೆಯತ್ತ ಸಾಗಿದ್ದರು. ಮುಂದಿನ ಸುತ್ತುಗಳಲ್ಲಿ ಚೇತರಿಸಿಕೊಂಡು ಮತ್ತೆ ಲೀಡ್‌ ಹೆಚ್ಚಿಸಿಕೊಳ್ಳುತ್ತಾ ಹೋದರು.

ಅಂತಿಮವಾಗಿ 9647 ಮತಗಳ ಅಂತರದಲ್ಲಿ ಶಾಸಕ ಎಂ.ಪಿ.ರವೀಂದ್ರ (57956) ಅವರನ್ನು ಪರಾಭವಗೊಳಿಸಿ ಕರುಣಾಕರ ರೆಡ್ಡಿ (67603) ವಿಜಯಮಾಲೆ ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.