ದಾವಣಗೆರೆ: ಮದ್ಯ ತುಂಬಿದ ಲಾರಿ, ಉಪ್ಪಿನ ಲಾರಿ ಮಧ್ಯೆ ಅಪಘಾತ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳು ರಸ್ತೆ ಪಾಲಾಗಿ, ಮದ್ಯಪ್ರಿಯರ ಪಾಲಿಗೆ `ಹಬ್ಬ~ವಾದ ಘಟನೆ ರಾಷ್ಟ್ರೀಯ ಹೆದ್ದಾರಿ -4ರಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಇಲ್ಲಿನ ಬಿ. ಕಲ್ಪನಹಳ್ಳಿಯಲ್ಲಿ ಬೆಳಿಗ್ಗೆ ಕಿಂಗ್‌ಫಿಷರ್ ಬಿಯರು ಬಾಟಲಿ ತುಂಬಿದ ಬಾಕ್ಸ್‌ಗಳನ್ನು ಹೊತ್ತ ಲಾರಿ ಹಾಗೂ ಉಪ್ಪು ತುಂಬಿದ್ದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಢಮ್ಮನೆ ಸ್ಫೋಟಗೊಂಡ ಬಿಯರ್ ಬಾಟಲಿಗಳು ಚೂರು ಚೂರಾಗಿ ರಸ್ತೆಯ ತುಂಬಾ ಹರಡಿದವು. ತಕ್ಷಣವೇ ಬಾಟಲಿಗಳು ರಸ್ತೆತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಲಾರಿಯ ಕ್ಯಾರಿಯರ್‌ನಲ್ಲಿದ್ದ ಬಾಟಲಿಗಳು ಬಾಕ್ಸ್ ಒಳಗೇ ಚೂರಾಗಿದ್ದವು.
ವಿಷಯ ತಿಳಿದ ಆಸುಪಾಸಿನ ಮದ್ಯಪ್ರಿಯರು ದೌಡಾಯಿಸಿ ಘಟನೆಯನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೇ ರಸ್ತೆ ತುಂಬಾ ಬಿದ್ದಿದ್ದ ಬಾಟಲಿಗಳನ್ನು ಹೆಕ್ಕಿಕೊಂಡರು. ಅದೇ ವೇಳೆಗೆ ಮಾಧ್ಯಮದವರು ಘಟನೆ ಚಿತ್ರೀಕರಿಸುತ್ತಿದ್ದಂತೆಯೇ `ಫೋಟೋ ತಕ್ಕಬ್ಯಾಡಿ ಸಾರ್, ಒಂದೇ ಬಾಟ್ಲು ತಗಂಡಿರೋದು~ ಎಂದು ಬಾಟಲಿ ಮರೆಮಾಚುತ್ತಾ ಜಾಗ ಖಾಲಿ ಮಾಡಿದರು. ಕೆಲವು ಯುವಕರಂತೂ ತಮ್ಮಿಂದ ಸಾಧ್ಯವಾದಷ್ಟು ಬಿಯರ್ ಬಾಟಲಿಗಳನ್ನು ಎದೆಗವುಚಿಕೊಂಡು ಒಯ್ದರು.
ಹುಬ್ಬಳ್ಳಿಗೆ ಸೇರಿದ ಬಿಯರ್ ಬಾಕ್ಸ್ ಹೊತ್ತ ಲಾರಿ ಚಿತ್ರದುರ್ಗದಿಂದ ದಾವಣಗೆರೆಯತ್ತ ಸಂಚರಿಸುತ್ತಿತ್ತು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಸಿಪಿಐ ಜಿ.ಎ. ಜಗದೀಶ್, ಪಿಎಸ್‌ಐ ರಾಜಶೇಖರ್ ಮತ್ತು ತಂಡದವರು ಬಂದೋಬಸ್ತ್ ಏರ್ಪಡಿಸಿದರು. ತಕ್ಷಣವೇ ಹೆದ್ದಾರಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಯಿತು. ಹೆದ್ದಾರಿ ಕಾರ್ಮಿಕರು ಹಾಗೂ ಸ್ಥಳೀಯರು ಸೇರಿ ರಸ್ತೆ ಸ್ವಚ್ಛಗೊಳಿಸಿದರು.
ಲಾರಿಯಲ್ಲಿ ಸುಮಾರು ್ಙ 8 ಲಕ್ಷ ಮೌಲ್ಯದ ಮದ್ಯ ತುಂಬಿತ್ತು. ಘಟನೆಯಲ್ಲಿ ಸುಮಾರು 5ರಿಂದ 6 ಲಕ್ಷ ಮೌಲ್ಯದ ಬಿಯರ್ ನಷ್ಟವಾಗಿದೆ. ಬಿಯರ್ ಲಾರಿ ಚಾಲಕ ಈರಣ್ಣ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ನಿಖರ ಮೌಲ್ಯ ಇನ್ನಷ್ಟೇ ಆಗಬೇಕಿದೆ ಎಂದು ಸಿಪಿಐ ಜಗದೀಶ್ ತಿಳಿಸಿದರು.
ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.